ಚಂಡೀಗಢ: ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹ 47ನೇ ದಿನಕ್ಕೆ ಕಾಲಿಟ್ಟಿದ್ದು, ರಕ್ತದೊತ್ತಡ, ಹೃದಯಾಘಾತದ ಭೀತಿಯಿಂದ ಮತ್ತಿತರ ತೊಂದರೆಗಳು ಕಾಣಿಸಿಕೊಂಡಿದ್ದು, ಅವರ ಆರೋಗ್ಯ ತೀವ್ರ ರೀತಿಯಲ್ಲಿ ಹದಗೆಟ್ಟಿದೆ.
ಪ್ರತಿ ನಿಮಿಷವೂ ಬಹಳ ಮುಖ್ಯವಾಗಿದ್ದು, ಪಟಿಯಾಲ ಬದಲಿಗೆ ಖನೌರಿ ಗಡಿಯಲ್ಲಿ ಜನವರಿ 15 ರಂದು ನಡೆಸಲು ಉದ್ದೇಶಿಸಲಾಗಿದ್ದ ಸಭೆಯನ್ನು ನಾಳೆ ಅಥವಾ ನಾಡಿದ್ದು ನಡೆಸಬೇಕು ಎಂದು ಕಿಸಾನ್ ಮಜ್ದೂರ್ ಸಂಘರ್ಷ ಮೋರ್ಚಾ ಮತ್ತು ಎಸ್ಕೆಎಂ (ರಾಜಕೀಯೇತರ) ಮುಖಂಡರು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರನ್ನು ಒತ್ತಾಯಿಸಿದ್ದಾರೆ.
ದಲ್ಲೆವಾಲ್ ಅವರ ketone ಮತ್ತು ಯೂರಿಕ್ ಆಸಿಡ್ ಮಟ್ಟಗಳು ಆತಂಕಕಾರಿಯಾಗಿ ಹೆಚ್ಚಿವೆ. ಆದರೆ ಅವರ ಪೊಟ್ಯಾಸಿಯಮ್, ಸೋಡಿಯಂ, ಕ್ಲೋರೈಡ್ ಮತ್ತು ಪ್ರೋಟೀನ್ ಮಟ್ಟಗಳು ಕುಸಿದಿವೆ. ನೀರು ಬಿಟ್ಟರೆ ಬೇರೆ ಏನನ್ನೂ ಸೇವಿಸದ ಹಿನ್ನೆಲೆಯಲ್ಲಿ ಪೊಟ್ಯಾಶಿಯಮ್ ಮತ್ತು ಸೋಡಿಯಂ ಮಟ್ಟ ಕಡಿಮೆಯಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಸೋಡಿಯಂ ಮಟ್ಟದಲ್ಲಿನ ಕುಸಿತದಿಂದ ತಲೆತಿರುಗುವಿಕೆ ಮತ್ತು ಏಕಾಗ್ರತೆಗೆ ತೊಂದರೆಯಾಗಲಿದೆ. ದಿನದಿಂದ ದಿನಕ್ಕೆ ಅಸ್ಥಿಪಂಜರದಂತೆ ಅವರ ಸ್ಥಿತಿಯು ಹದಗೆಡುತ್ತಿದೆ ಎಂದು ಖನೌರಿ ಗಡಿಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿರುವ ವೈದ್ಯಕೀಯ ತಂಡದ ಮುಖ್ಯಸ್ಥ ಡಾ. ಅವತಾರ್ ಸಿಂಗ್ TNIE ಗೆ ತಿಳಿಸಿದ್ದಾರೆ.
ಕೊರೆಯುವ ಚಳಿಯಲ್ಲಿ ಟ್ರಾಕ್ಟರ್ ಟ್ರಾಲಿಯಲ್ಲಿ ಮಲಗಿರುವ 75 ವರ್ಷದ ದಲ್ಲೆವಾಲ್ ಗೆ ಯಾವುದೇ ಸಂದರ್ಭದಲ್ಲಿ ಏನಾದರೂ ಸಂಭವಿಸಬಹುದು. ಅವರನ್ನು ನಿಲ್ಲಿಸಲು ಅಥವಾ ಕೂರಿಸಲು ಸಾಧ್ಯವಾಗದೆ ಅವರ ತೂಕ ಕಂಡುಹಿಡಿಯುವುದು ವೈದ್ಯರಿಗೆ ಕಷ್ಟವಾಗಿದೆ.
ಅವರನ್ನು ಕೆಲವು ನಿಮಿಷಗಳ ಕಾಲ ಕೂರಿಸಲು ಪ್ರಯತ್ನಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಅವರ ರಕ್ತದೊತ್ತಡ ಪ್ರಮಾಣ 90ರ ಸಮೀಪದಲ್ಲಿದೆ. ಅದನ್ನು ಸ್ಥಿರಗೊಳಿಸಲು, ಅವರ ಕಾಲುಗಳನ್ನು ಎತ್ತರದಲ್ಲಿ ಇಡಬೇಕು. ಅವರ ಪಾದಗಳಿಗೆ ಬೆಂಬಲವಾಗಿ ಹಾಕಲಾಗಿರುವ ದಿಂಬನ್ನು ತೆಗೆದರೆ ರಕ್ತದೊತ್ತಡ ಮತ್ತಷ್ಟು ಇಳಿಯುತ್ತದೆ. ಹೃದಯ ಮತ್ತು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸಲು ಕಾಲುಗಳನ್ನು ಎತ್ತರಿಸಿದಾಗ ಮಾತ್ರ ಒತ್ತಡ ಸ್ಥಿರಗೊಳ್ಳುತ್ತದೆ. ಹೃದಯ ಸ್ತಂಭನವು ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂದು ಸಿಂಗ್ ವಿವರಿಸಿದರು.
ದಲ್ಲೆವಾಲ್ ಅವರ ಗಂಭೀರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಪಟಿಯಾಲ ಬಳಿ ಜನವರಿ 15 ರಂದು ಪಟಿಯಾಲದಲ್ಲಿ ಆಯೋಜಿಸಲಾಗಿದ್ದ ಸಭೆ ಕುರಿತ ಚರ್ಚಿಸಲು ನಾಳೆ ಅಥವಾ ನಾಡಿದ್ದು, ಖನೌರಿಗೆ ಬರುವಂತೆ ರೈತ ಸಂಘಟನೆ SKM ತನ್ನ ಮುಖಂಡರು ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಮೋರ್ಚಾದ ನಾಯಕರಿಗೆ ಮನವಿ ಮಾಡಿರುವುದಾಗಿ ರೈತ ಮುಖಂಡ ಸುರ್ಜಿತ್ ಸಿಂಗ್ ತಿಳಿಸಿದ್ದಾರೆ.