ಮೈಸೂರು: ದಸರಾ ಹಬ್ಬವು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಆಸ್ತಿಕತೆ ನಾಸ್ತಿಕತೆ ಎಂಬುದರ ಬಗ್ಗೆ ದಸರಾದಲ್ಲಿ ಚರ್ಚೆ ಅಪ್ರಸ್ತುತ ಎಂದಿದ್ದಾರೆ.
ದಸರಾ ಆಚರಣೆ ಅರಮನೆ ಹಬ್ಬವಲ್ಲ. ಜನರು ಆರಿಸಿದ ಸರಕಾರ ನಡೆಸುವ ಜನರ ಹಬ್ಬ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಎಷ್ಟೆ ಅಡ್ಡಿ ಆತಂಕ ಎದುರಾಗುತ್ತಿದ್ದರು. ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಧೈರ್ಯ ತುಂಬಿದರು.
ಸರ್ಕಾರ ಅಸ್ಥಿರತೆ ಮಾಡಬೇಡಿ ಎಂಬ ಕಿವಿಮಾತು ಹೇಳಿದ ಹಂಪ ನಾಗರಾಜಯ್ಯ, ಸರ್ಕಾರಗಳನ್ನ ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು. ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು. ಲೋಕಾಂಬಿಕೆಯೂ ಅಂತಹ ಚಿಂತನೆ ಮೂಡಿಸಲಿ. ಕೆಡುವುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಶ್ರೀಸಾಮಾನ್ಯರು ಬಳಲಿ ಬಸವಳಿದಿದ್ದಾರೆ. ಪುನಃ ನಡೆಯುವ ಚುನಾವಣೆಗಳು ದೊಡ್ಡ ಹೊರೆಯಾಗಲಿವೆ. ಜನರಿಗೆ ಇನ್ನಷ್ಟು ಭಾರ ಹೇರಿದರೆ ಕುಸಿದುಬಿಡುತ್ತಾನೆ ಯಾವ ಪಕ್ಷವೂ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿಃ ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬಹುದು. ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷ ಸಜ್ಜಾಗಬಹುದು ಎಂಬ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಎಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಕೆ.ಎಚ್. ಮುನಿಯಪ್ಪ, ಶಾಸಕರಾ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಹರೀಶ್ಗೌಡ, ದರ್ಶನ್ ದ್ರುವನಾರಾಯಣ, ಅನಿಲ್ ಚಿಕ್ಕಮಾದು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.