“ಮಂದಗೆರೆ ಕಲಾ – ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಪುಷ್ಕರ ಪ್ರಿಂಟರ್ಸ್ ಆಂಡ್ ಪಬ್ಲಿಕೇಷನ್ಸ್” ಇವರ ಸಂಯುಕ್ತಾಶ್ರಯದಲ್ಲಿ ಇದೇ ಅಕ್ಟೋಬರ್ “20 ” ಭಾನುವಾರದಂದು ಮಲ್ಲೇಶ್ವರಂನ ಗಾಂಧೀ ಸಾಹಿತ್ಯ ಸಂಘದಲ್ಲಿ, “ಮಾಸದಂಗಳದಲ್ಲಿ ಕವಿ ಬೆಳಕು” ಎಂಬ ದಾಖಲೆಯ ಕನ್ನಡ ಕಾಯಕ ಯೋಜನೆಯಡಿ ಯಲ್ಲಿ ಮೂರನೇ ಕವಿಗೋಷ್ಟಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.
ನವ್ಯಕಾವ್ಯ ಪ್ರವರ್ತಕ ಡಾ. ಎಂ. ಗೋಪಾಲಕೃಷ್ಣ ಅಡಿಗರ ಸಂಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಈ ಕವಿಗೋಷ್ಠಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಕವಿಗೋಷ್ಠಿಯ ಜೊತೆಗೆ, ಗೀತಗಾಗಾಯನ, ಸುಗಮ ಸಂಗೀತ ಕಾರ್ಯಕ್ರಮಗಳೂ ನೆರೆದವರ ಮೆಚ್ಚುಗೆಗೆ ಕಾರಣವಾಯಿತು. 10 ಗಂಟೆಗೆ ಸರಿಯಾಗಿ ಆರಂಭವಾದ ಕಾರ್ಯಕ್ರಮ ಸುಮಾರು 3.30 ರವರೆಗೂ ನಡೆದು ಅಭೂತಪೂರ್ವ ಕಾರ್ಯಕ್ರಮಕ್ಕೆ ಗಾಂಧೀಸಾಹಿತ್ಯ ಸಂಘ ಸಾಕ್ಷಿಯಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ “ನವ್ಯ ಕಾವ್ಯ ” ಎಂಬ ವಿಷಯದಡಿ ವಿಚಾರ ಸಂಕಿರಣವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷರಾಗಿ ಖ್ಯಾತ ರಂಗಭೂಮಿ, ಜನಪದ ಹಾಗೂ ಸುಗಮ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ಡಾ|| ಕಿಕ್ಕೇರಿ ಕೃಷ್ಣಮೂರ್ತಿ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನವ್ಯಕಾವ್ಯದ ಕುರಿತು, ಗೋಪಾಲಕೃಷ್ಣ ಅಡಿಗರ ಕುರಿತಾಗಿ ನೆರೆದ ಕವಿಗಳಿಗೆ ಕೆಲವು ವಿಶೇಷ ಮಾಹಿತಿ ನೀಡಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು.
ವಿಚಾರಸಂಕಿರಣದಲ್ಲಿ ಮಂದಗೆರೆ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಸ್ಥಾಪಕ ಟ್ರಸ್ಟಿ ಅನಿತಾ ಪಿ.ಕೆ , ಸಾಹಿತಿಗಳಾದ ಶ್ರೀಮತಿ ರಾಜೇಶ್ವರಿ ಅಚ್ಯುತ್, ಶ್ರೀಮತಿ ಸುಜಾತ ರವೀಶ್ ಭಾಗವಹಿಸಿದ್ದರು. ಕರ್ನಾಟಕ ಶಾಸ್ರೀಯ ಸಂಗೀತಗಾರರಾದ ದೀಪಾ ಕಾರ್ಗಲ್ ಗೀತಗಾಯನ ಕಾರ್ಯಕ್ರಮದಲ್ಲಿ ಅಡಿಗರ ಹಾಡುಗಳನ್ನ ಹಾಡಿದರು. ಕುಮಾರಿ ನಿಖಿತ ಮೋಕ್ಷಗುಂಡಂ ಹಾಗೂ ಕುಮಾರಿ ತನುಶ್ರೀ ಸಂತೋಷ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಬಾರಿಯ ಕವಿಗೋಷ್ಠಿಯಲ್ಲಿ , ಕವಯತ್ರಿಯರಾದ ಶ್ರೀಮತಿ ರಮಾ ಸುದರ್ಶನ , ಶ್ರೀಮತಿ ಗೀತಾ ಕೈಲ್ಕೆರೆ ಮತ್ತು ಶ್ರೀಮತಿ ಅನಿತಾ.ಪಿ.ಕೆ ಆಯಾ ಕವಿಗಳ ಕವನ ವಾಚನದ ನಂತರ ಕವನದ ಕುರಿತು ವಿಮರ್ಶೆ ಮತ್ತು ವಿಶ್ಲೇಷಣೆ ಮಾಡಿರುವುದು ವಿಷೇಷವಾಗಿತ್ತು.ಕಾರ್ಯಕ್ರಮದ ಕೊನೆಯಲ್ಲಿ, ಅತಿಥಿಗಳಿಗೆ ಹಾಗೂ ಅಧ್ಯಕ್ಷರಿಗೆ ವ್ಯಸ್ಥಾಪಕ ಟ್ರಸ್ಟಿ ಶ್ರೀ ರಾಮ್ಕುಮಾರ್ ಮಂದಗೆರೆ ಹಾಗೂ ಸಂಸ್ಥಾಪಕ ಟ್ರಸ್ಟಿ ಶ್ರೀಮತಿ ಅನಿತಾ ಪಿ.ಕೆ “ಶ್ರೀ ಗೋಪಾಲಕೃಷ್ಣ ಅಡಿಗರ ಸದ್ಭಾವನ ಪುರಸ್ಕಾರ” ಮಾಡಿ ಅತಿಥಿಗಳನ್ನ ಗೌರವಿಸಿದರು.
ಕೊನೆಯಲ್ಲಿ ಎಲ್ಲ ಕವಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶ್ರಿಮತಿ ಸುವರ್ಣಾ ಗಾಂವ್ಕರ ಹಾಗೂ ಕವಿಗೋಷ್ಠಿಯ ನಿರೂಪಣೆಯನ್ನು ಮಧುರಾ ಗಾಂವ್ಕರ ನೆರವೇರಿಸಿದರು.”ನಮ್ಮ ಉಸುರು , ನಮ್ಮ ಕಸುವು ಕನ್ನಡ, ನಮ್ಮ ಹೆಸರು ನಮ್ಮ ಕಸುಬು ಕನ್ನಡ ಕನ್ನಡವಿದು ಕನ್ನಡ ಬನ್ನಿ ನಮ್ಮ ಸಂಗಡ “ಎಂಬ ಡಾ|| ಎಂ.ಗೋಪಾಲಕೃಷ್ಣರ ಅಡಿಗರ ಮಾತಿಗೆ ಬದ್ಧವಾಗಿ, ಕಟ್ಟುವೆವು ನಾವು ಹೊಸ ನಾಡೊಂದನು ಎನ್ನತ್ತಲೇ ಮಂದಗೆರೆ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದ್ದಿಲ್ಲದೆ ಕನ್ನಡದ ಕಂಪನ್ನು ಪಸರಿಸುತ್ತಾ ಎಲ್ಲೆಡೆ ಕನ್ನಡದ ಛಾಪನ್ನು ಒತ್ತುತ್ತಾ ಕನ್ನಡ ತಾಯಿ ಭುವನೇಶ್ವರಿ ದೇವಿಯ ಸೇವೆಯನ್ನ ಮಾಡುತ್ತಿದೆ. ಇವರ ಕಾರ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಇವರ ಸೇವೆ ಹೀಗೆ ನಿರಂತರವಾಗಿರಲಿ ಇನ್ನಷ್ಟು ಕನ್ನಡದ ಕಾರ್ಯಕ್ರಮಗಳು ಇವರ ವೇದಿಕೆಯಡಿ ನಡೆಯಲಿ ಎಂದು ಹಾರೈಸೋಣ.