ಹೊಸಕೋಟೆ: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಾನಿಗಳು ನೀಡುವ ಕೊಡುಗೆಯನ್ನು ಸಾರ್ಥಕಗೊಳಿಸಬೇಕು ಎಂದು ಉದ್ಯಮಿ ಪಿ. ಮೃತ್ಯುಂಜಯ ಹೇಳಿದರು.ಅವರು ತಾಲೂಕಿನ ಜಡಿಗೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನೋಟ್ಪುಸ್ತಕ, ಲೇಖನಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಬೆಂಗಳೂರಿನಲ್ಲಿ ನೆಲೆಸಿದ್ದ ದಿ. ಬಿ.ಆರ್.ಪುಟ್ಟಣ್ಣನವರ 17ನೇ ಸಂಸ್ಮರಣೆಯ ಪ್ರಯುಕ್ತ ಕುಟುಂಬದವರು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕ, ಲೇಖನಸಾಮಗ್ರಿ, ಸಮವಸ್ತ್ರ, ಬ್ಯಾಗ್ಗಳನ್ನು ವಿತರಿಸುವ ಮೂಲಕ ಇವರಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದಿ.ಬಿ.ಆರ್.ಪುಟ್ಟಣ್ಣನವರ ಹಿರಿಯ ಪುತ್ರ ವಕೀಲ ರಾಜಶೇಖರ್ರವರು ಈ ಬಾರಿ ಉಚಿತವಾಗಿ ಧ್ವನಿವರ್ಧಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ 120 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ನೋಟ್ಪುಸ್ತಕ, ಬ್ಯಾಗ್ಗಳನ್ನು ವಿತರಿಸಿ ಪ್ರೋತ್ಸಾಹಿಸಲಾಗುತ್ತಿದೆ.
ವಿದ್ಯಾರ್ಥಿಗಳು ಇವರ ಕೊಡುಗೆಯನ್ನು ಸಮರ್ಥವಾಗಿ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಶ್ರಮಿಸಬೇಕು ಎಂದರು. ದಿ. ಬಿ.ಆರ್.ಪುಟ್ಟಣ್ಣನವರ ಕುಟುಂಬದವರಾದ ರೀಟಾ, ಉದ್ಯಮಿ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಸದಸ್ಯ ಜೆ.ಆರ್.ಡಿ. ಮಂಜುನಾಥ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟಲಕ್ಷ್ಮಮ್ಮ , ಶಾಲೆಯ ಮುಖ್ಯ ಶಿಕ್ಷಕಿ ಎಂ.ಎನ್.ರತ್ನಮ್ಮ, ಸಹ ಶಿಕ್ಷಕಿಯರಾದ ವಿಜಯ, ಅಶ್ವಿನಿ, ಸಾವಿತ್ರಿ, ನಾಗರತ್ನ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್, ಪೋಷಕರು ಇನ್ನಿತರರು ಭಾಗವಹಿಸಿದ್ದರು.