ಬೆಂಗಳೂರು: ದಾಸರಹಳ್ಳಿ ವಲಯದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಸೂಚನೆ ನೀಡಿದ್ದಾರೆ.
ಮುಖ್ಯ ಆಯುಕ್ತರ ನಡಿಗೆ ವಲಯದೆಡೆಗೆ’ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ದಾಸರಹಳ್ಳಿ ವಲಯಕ್ಕೆ ಬಿಬಿಎಂಪಿ ಆಯುಕ್ತರಪು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ವಲಯದಲ್ಲಿ 24 ಪ್ರಮುಖ ರಸ್ತೆಗಳಿದ್ದು, 60 ದಿನಗಳೊಳಗೆ ಈ ರಸ್ತೆ ಬದಿಗಳ ಚರಂಡಿಗಳನ್ನು ತೆರವುಗೊಳಿಸಬೇಕು. ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ಬಿ ಮತ್ತಿತರ ಏಜೆನ್ಸಿಗಳು ಬಿಬಿಎಂಪಿಯ ಅನುಮತಿಯಿಲ್ಲದೆ ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗಯುತ್ತಿವೆ. ಬಳಿಕ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಇದು ರಸ್ತೆಗಳು ಹದಗೆಡಲು ಕಾರಣವಾಗಿದೆ. ಯಾವುದೇ ಸಂಸ್ಥೆಗಳು ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಆನ್ಲೈನ್ನಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಗಡುವಿನೊಳಗೆ ಕೆಲಸ ಪೂರ್ಣಗೊಳಿಸಬೇಕು, ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಮರುಸ್ಥಾಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ನಗರದಾದ್ಯಂತ ಎಲ್ಇಡಿ ದೀಪಗಳನ್ನು ಅಳವಡಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಅಬ್ಬಿಗೆರೆ ಕೆರೆ 45 ಎಕರೆ ಪ್ರದೇಶದಲ್ಲಿದ್ದು, 4.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಕಾಮಗಾರಿಯಲ್ಲಿ ಈಗಾಗಲೇ ಹೂಳೆತ್ತುವ ಕಾರ್ಯ, ಸೀವೇಜ್ ಡೈವರ್ಷನ್ ಡ್ರೈನ್, ಬಂಡ್ ನಿರ್ಮಿಸುವ, ಇನ್ಲೆಟ್ ಹಾಗೂ ಔಟ್ ಲೆಟ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಫೆನ್ಸಿಂಗ್ ಅಳವಡಿಸುವ, ಶೌಚಾಲಯ, ಬದ್ರತಾ ಸಿಬ್ಬಂದಿಯ ಕೊಠಡಿ ಹಾಗೂ ಪ್ರವೇಶ ದ್ವಾರದ ಕಾಮಗಾರಿ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಕೆರೆಯ ಒಂದು ಭಾಗದ ಕಲ್ವರ್ಟ್ ಮಳೆಗಾಲದ ವೇಳೆ ಕೊಚ್ಚಿ ಹೋಗಿದ್ದು, ಅದರ ದುರಸ್ಥಿ ಕಾಮಗಾರಿಗಾಗಿ 1.05 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೂಡಲೆ ಕಾಮಗಾರಿ ಪ್ರಾರಂಭಿಸಿ ಕಲ್ವರ್ಟ್ ಕಾಮಗಾರಿ, ರಾಜಕಾಲುವೆಯ ಆರ್.ಸಿ.ಸಿ ಗೋಡೆ ಸೇರಿದಂತೆ ಇನ್ನಿತರೆ ಕಾಮಗಾರಿಯನ್ನು ಪ್ರಾರಂಭಿಸಿ ನಿಗದೊಯ ಸಮಯದೊಳಗಾಗಿ ಪೂರ್ಣಗೊಳಿಸಲು ಸೂಚಿಸಿದ್ದು, ಶೆಟ್ಟಿಹಳ್ಳಿಯ ಆರ್.ಕೆ. ಎನ್ ಕ್ಲೇವ್ ಬಳಿ ರಸ್ತೆ ಡಾಂಬರೀಕರಣ ಹಾಕಿರುವುದನ್ನು ಪರಿಶೀಲಿಸಿ, ಸೈಡ್ ಡ್ರೈನ್ ಗೆ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದರು.