ದೇವನಹಳ್ಳಿ: ದಾಸ ಶ್ರೇಷ್ಠ ಕನಕದಾಸರು 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ ಭಕ್ತಿಭಂಡಾರ ಬಸವಣ್ಣನವರಂತೆ 15 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ಮಹಾನ್ ಸಂತ ಕನಕದಾಸರು ಪ್ರಮುಖರು, ಸಮಾಜದ ಪರಿವರ್ತನೆ ಹಾಗೂ ಮೇಲು ಕೀಳು ಎಂಬ ಮನೋಭಾವನೆ ಹೋಗಲಾಡಿಸಲು ದಾಸಶ್ರೇಷ್ಠ ಕನಕದಾಸರ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ತಿಳಿಸಿದರು.
ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಪಟ್ಟಣದ ಡಾ||ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂತಕವಿ ಕನಕದಾಸರ 537 ನೇ ಜಯಂತ್ಯುತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ ಕನಕದಾಸರು ಸಮಾಜದ ಸುಧಾರಣೆಗಾಗಿ ರಚಿಸಿದ ಕೀರ್ತನೆಗಳು ಇಂದಿಗೂ ಪ್ರಚಲಿತವಾಗಿವೆ, ಸಮಾಜ ಸುಧಾರಣೆಗೆ ಶ್ರಮಿಸಿದ.
ಮಹಾನ್ ದಾರ್ಶನಿಕ ಕನಕದಾಸರು. ಮಾನವಕುಲ ವೊಂದೇ ಎಂದು ಸಮಾಜದ ಸಮಾನತೆಗಾಗಿ ಶ್ರಮಿಸಿದರು, ಬಸವಣ್ಣ, ಸಂತ ತುಕರಾಂ, ಪುರಂದರದಾಸರು ಇವರೆಲ್ಲರೂ ಇತಿಹಾಸ ಕಂಡ ಮಹಾನ್ ವ್ಯಕ್ತಿಗಳು ಅವರ ಸಾಲಿನಲ್ಲಿ ಕನಕದಾಸರು ಸೇರುತ್ತಾರೆ, ಪ್ರತಿಯೊಂದು ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ, ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮುದಾಯದ ಸರ್ವೋತೋಮುಖ ಅಭಿವೃದ್ಧಿ ಹೊಂದಬೇಕು ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಡಾ|| ಎನ್. ಶಿವಶಂಕರ ಮಾತನಾಡಿ ಕನಕದಾಸರು 15 ನೇ ಶತಮಾನದ ದಾಸಶ್ರೇಷ್ಠರು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲು, ಬಹಳಷ್ಟು ಅಧ್ಯಯನವನ್ನು ಮಾಡಿ ಸರಳವಾಗಿ ಅರ್ಥವಾಗುವಂತಹ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ, ಸಮಾಜದ ಮುನ್ನಡೆಗಾಗಿ, ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಮತ್ತು ಮೂಢನಂಬಿಕೆಯ ವಿರುದ್ಧ ಬಹಳಷ್ಟು ಹೋರಾಟ ನಡೆಸಿ ಮನುಕುಲ ಒಂದೇ ಎಂಬುದನ್ನು ಪ್ರತಿಪಾದಿಸಿದ ಕನಕರು, ನಾವೆಲ್ಲರೂ ಜೀವನದಲ್ಲಿ ಕನಕದಾಸರ ಜೀವನಾದರ್ಶದ ಮೌಲ್ಯಗಳನ್ನು ಅಳವಡಿಕೊಂಡು ಪ್ರತಿ ದಿನವೂ ಪಾಲನೆ ಮಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಡಾ||ಹುಲಿಕುಂಟೆ ಮೂರ್ತಿ ಅವರು ಮಾತನಾಡಿ, ಕನಕದಾಸರನ್ನ ದಾಸಶ್ರೇಷ್ಟ ಅಷ್ಟಕ್ಕೇ ಸೀಮಿತಗೊಳಿಸಲಾಗಿದೆ ಆದರೆ ಅವರೊಬ್ಬ ಸಂತ, ಕವಿ, ಹೋರಾಟಗಾರ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿಭಕ್ತಸಾರದಂತಹ ಮೇರು ಕೃತಿಗಳನ್ನು ರಚಿಸಿದ್ದಾರೆ. ಅವರೊಬ್ಬ ಕನ್ನಡ ನಾಡಿನ ಪ್ರಜ್ಞೆ, 316 ಕೀರ್ತನೆಗಳನ್ನ ಬರೆದಿರುವ ಅವರು, ಸಮಾಜದಲ್ಲಿ ಬಹಳ ನೋವುಂಡವರು ಸೇವೆಯನು ಕೊಡೊ ಹರಿಯೆ ಎನ್ನುವ ಮೂಲಕ ಹರಿಯನ್ನು ಪ್ರಶ್ನಿಸಿದವರು ಕನಕರನ್ನ ಒಂದು ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವನನ್ನಾಗಿ ನೋಡಬೇಕಾಗಿದೆ ಎನ್ನುವ ಮೂಲಕ ಸಂತಕವಿ ಕನಕದಾಸರ ಜೀವನ, ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ 10ನೇ ತರಗತಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸರ ವೃತ್ತದಿಂದ ಡಾ||ಬಿ.ಆರ್. ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ದಾಸ ಶ್ರೇಷ್ಠ ಕನಕದಾಸರ ಉತ್ಸವ, ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ. ರಾಜಣ್ಣ, ದೇವನಹಳ್ಳಿ ಬ್ಲಾಕ್ ಅಧ್ಯಕ್ಷ ಪ್ರಸನ್ನಕುಮಾರ್, ಎಸ್.ಪಿ.ಮುನಿರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ರವಿಕುಮಾರ್, ದೇವನಹಳ್ಳಿ ತಹಶೀಲ್ದಾರ್ ಹೆಚ್.ಬಾಲಕೃಷ್ಣ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಪುರಸಭಾ ಸದಸ್ಯ ಜಿ.ಎ.ರವೀಂದ್ರ, ಮಹೇಶ್ಬಾಬು, ಮಾದವಿ, ರಾಧಾ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.