ಬೆಂಗಳೂರು: ನಾರಾಯಣ ಸೇವಾ ಸಂಸ್ಥಾನದ ಆಶ್ರಯದಲ್ಲಿ ಬೆಂಗಳೂರಿನ ಜಯನಗರದ ಚಂದ್ರಸಾಗರ ಕಲ್ಯಾಣ ಮಂಟಪದಲ್ಲಿ ನಾರಾಯಣ್ ಅಂಗಾಂಗ ಮತ್ತು ಕ್ಯಾಲಿಪರ್ಸ್ ಮಾಪನ ಮತ್ತು ಶಸ್ತ್ರ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.ರಾಜ್ಯವಷ್ಟೇ ಅಲ್ಲದೇ ದಕ್ಷಿಣ ಭಾರತದಿಂದ ದಿವ್ಯಾಂಗರು ಆಗಮಿಸಿದ್ದರು. ಅಂಗಾಂಗ ಮಾಪನ ಶಿಬಿರದಲ್ಲಿ ನಾರಾಯಣ ಸೇವಾ ಸಂಸ್ಥಾನದ ತಜ್ಞ ವೈದ್ಯರು ದಿವ್ಯಾಂಗರ ಅಳತೆ ತೆಗೆದುಕೊಂಡರು.
ಬಳ್ಳಾರಿ, ವಿಜಯನಗರ, ರಾಯಚೂರು, ಬೀದರ್, ಬೆಳಗಾವಿ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾವೇರಿ, ಉಡುಪಿ, ಬಾಗಲಕೋಟ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ದಕ್ಷಿಣ ಭಾರತದಿಂದ 1050 ದಿವ್ಯಾಂಗರು ಆಗಮಿಸಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ದಿವ್ಯಾಂಗದೊಂದಿಗೆ ಸಮಾಲೋಚಿಸಿದರು. ನಂತರ ಶಿಬಿರ ಉದ್ಘಾಟಿಸಿ ಮಾತನಾಡಿ, ನಾರಾಯಣ ಸೇವಾ ಸಂಸ್ಥೆಯ ಮಾದರಿಯಲ್ಲಿ ಮಹೋನ್ನತ ಸೇವೆ ಸಲ್ಲಿಸುತ್ತಿರುವ ಮತ್ತೊಂದು ಸಂಸ್ಥೆಯನ್ನು ದೇಶವಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ನೋಡಿಲ್ಲ. ಬದ್ಧತೆ, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದೆ.
ಕಷ್ಟಪಡುವ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಜೊತೆಗೆ ಗುಣಮಟ್ಟದ ಅಂಗಾಂಗಳನ್ನು ಜೋಡಿಸುತ್ತಿದೆ. ಜೊತೆಗೆ ದಿವ್ಯಾಂಗರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.ನಾರಾಯಣ ಸೇವಾ ಸಂಸ್ಥೆಗೆ ಬೆಂಗಳೂರಿನಲ್ಲಿ ತನ್ನ ಶಾಖೆ ತೆರೆಯಲು ಉಚಿತ ನಿವೇಶನ ದೊರಕಿಸಿಕೊಡುವ ಜವಾಬ್ದಾರಿ ತಮ್ಮದು. ಇದಕ್ಕಾಗಿ ಶೇ 100ಕ್ಕಿಂತ ಅಧಿಕ ಪ್ರಯತ್ನ ಮಾಡುತ್ತೇನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸರ್ಕಾರ ಮಾಡುವ ಕೆಲಸವನ್ನು ನಿಮ್ಮ ಸಂಸ್ಥೆ ಮಾಡುತ್ತಿದೆ. ಕರ್ನಾಟಕದಲ್ಲೂ ಒಳ್ಳೆಯ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು.ನಾರಾಯಣ ಸೇವಾ ಸಂಸ್ಥಾನದ ಉಚಿತ ಸೇವೆಗಳು ಮತ್ತು ಶಿಬಿರದಲ್ಲಿ ಅಗಾಧ ಭಾಗವಹಿಸುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಂಗವಿಕಲರಿಗೆ ಸೇವೆ ಸಲ್ಲಿಸಲು ಶ್ರಮಿಸಿದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ಮತ್ತು ನಾರಾಯಣ ಸೇವಾ ಸಂಸ್ಥಾನದ ಸಂಪೂರ್ಣ ತಂಡವನ್ನು ಅವರು ಶ್ಲಾಘಿಸಿದರು. ವಿಕಲಚೇತನರ ಕಲ್ಯಾಣಕ್ಕಾಗಿ ಸಂಸ್ಥೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರು ಅಂಗವಿಕಲ ರನ್ನು ದೈಹಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಬಲೀಕರಣಗೊಳಿಸುವ ಸಂಸ್ಥಾನದ ಬದ್ಧತೆಯನ್ನು ಶ್ಲಾಘಿಸಿದರು, ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಕಲ್ಪಿಸುವ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು.ನಾರಾಯಣ ಸೇವಾ ಸಂಸ್ಥೆಯ ಟ್ರಸ್ಟಿ ಮತ್ತು ನಿರ್ದೇಶಕ ದೇವೇಂದ್ರ ಚೌಬಿಸಾ ಮಾತನಾಡಿ, ನಾರಾಯಣ ಸೇವಾ ಸಂಸ್ಥಾನ, ಉಚಿತ ಶಸ್ತ್ರಚಿಕಿತ್ಸೆಗಳು, ಅಂಗಾಂಗ ವಿತರಣೆ, 5,000 ವ್ಯಕ್ತಿಗಳಿಗೆ ದೈನಂದಿನ ಊಟ, ನಾರಾಯಣ ಮಕ್ಕಳ ಅಕಾಡೆಮಿಯಲ್ಲಿ 800 ಹಿಂದುಳಿದ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಕಂಪ್ಯೂಟರ್ನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ, ಮೊಬೈಲ್ ರಿಪೇರಿ, ಟೈಲರಿಂಗ್ ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಮೆಹೆಂದಿ ಅಪ್ಲಿಕೇಶನ್ ಮತ್ತು ಸಾಮೂಹಿಕ ಸಂಘಟನೆಯನ್ನು ಒಳಗೊಂಡಿರುತ್ತದೆ.
ಹೊಸ ಜೀವನವನ್ನು ಪ್ರಾರಂಭಿಸಲು ಅವರಿಗೆ ಸಹಾಯ ಮಾಡಲು ಮದುವೆ ಮತ್ತಿತರೆ ಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿದರು. ಬೆಂಗಳೂರು ಶಾಖೆಯ ಅಧ್ಯಕ್ಷ ವಿನೋದ್ ಜೈನ್ ಮಾತನಾಡಿ, ಮಕ್ಕಳು, ವಯಸ್ಕರು ಮತ್ತು ಎಲ್ಲಾ ವಯೋಮಾನದ ವ್ಯಕ್ತಿಗಳು ಭಾಗವಹಿಸಿದ್ದರು. ಇದು ಬೆಂಗಳೂ ರಿನಲ್ಲಿ ನಾರಾಯಣ ಸೇವಾ ಸಂಸ್ಥಾನದ ಮೂರನೇ ಶಿಬಿರವಾಗಿದ್ದು, ಜನರಲ್ ಮೋಟಾರ್ಸ್ ಸಿ.ಎಸ್.ಆರ್ ಉಪಕ್ರಮದ ಅಡಿಯಲ್ಲಿ ಬೆಂಬಲಿತವಾಗಿದೆ ಎಂದರು.ಜನರಲ್ ಮೋಟಾರ್ಸ್ನ ಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮುಂಬೈನ ಖುಬಿಲಾಲ್ ಮೆನಾರಿಯಾ ಮತ್ತು ಲಲಿತ್ ಲೋಹರ್, ಹರಿ ಪ್ರಸಾದ್ ಲಾಡ್ಡಾ, ಐಶ್ವರ್ಯಾ ತ್ರಿವೇದಿ ಮತ್ತಿತರರು ಶಿಬರದಲ್ಲಿ ಭಾಗವಹಿಸಿದ್ದರು.