ಬೆಂಗಳೂರು: ದೇಶಿ ಕ್ರಿಕೆಟ್ನ ಆರಂಭಿಕ ಪಂದ್ಯಾವಳಿಯಾದ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಹಂತದ ಪಂದ್ಯಗಳನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಇದ ರಲ್ಲಿ ಟೀಮ್ ಇಂಡಿಯಾದ ಬಹುತೇಕ ಟೆಸ್ಟ್ ಆಟಗಾರರು ಆಡುವುದು ವಿಶೇಷ.ಆದರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಗಾಯಾಳಾಗಿರುವ ವೇಗಿ ಮೊಹಮ್ಮದ್ ಶಮಿ ಅವರಿಗೆ ರಿಯಾಯಿತಿ ನೀಡಲಾಗಿದೆ.
ಹಾಗೆಯೇ ಸೀನಿಯರ್ ಕ್ರಿಕೆಟಿಗರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಕೂಡ ವಿನಾಯಿತಿ ಪಡೆಯುವ ಸಾಧ್ಯತೆ ಇದೆ. ಪಂದ್ಯಾವಳಿಯಲ್ಲಿ ಆಡುವ ಅಥವಾ ಆಡದಿರುವ ಆಯ್ಕೆಯನ್ನು ಇವರಿಗೇ ಬಿಡಲಾಗಿದೆ. ಭಾರತ ತಂಡದ ಆಟಗಾರರು ಪೂರ್ತಿ ಸರಣಿಯಲ್ಲಿ ಅಲ್ಲದೇ ಹೋದರೂ ಕೆಲವು ಪಂದ್ಯಗಳಲ್ಲಾದರೂ ಆಡಬೇಕು ಎಂದು ಬಿಸಿಸಿಐ ಈಗಾಗಲೇ ಸೂಚಿಸಿದೆ.
ಚಿನ್ನಸ್ವಾಮಿಯಲ್ಲಿ ಪಂದ್ಯ:ದುಲೀಪ್ ಟ್ರೋಫಿ ಪಂದ್ಯಾವಳಿಯ ಮೊದಲ ಸುತ್ತಿನ 2 ಹಂತದ ಪಂದ್ಯಗಳನ್ನು ಆಂಧ್ರಪ್ರದೇಶದ ಅನಂತಪುರದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಆದರೀಗ ಒಂದು ಹಂತದ ಪಂದ್ಯವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ’ಗೆ ಸ್ಥಳಾಂತರಿಸಲಾಗಿದೆ. ಪ್ರಯಾಣ, ಸಾಗಾಣಿಕೆ ಹಾಗೂ ಕೆಲವು ಉನ್ನತ ದರ್ಜೆಯ ಕ್ರಿಕೆಟಿಗರಿಗೆ ಎದುರಾಗುವ ವಸತಿ ಸಮಸ್ಯೆಯಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ. ಅನಂತಪುರ ಬೆಂಗಳೂರಿನಿಂದ ಸುಮಾರು 230 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ವಿಮಾನ ಸಂಚಾರ ಇಲ್ಲ.
ದುಲೀಪ್ ಟ್ರೋಫಿ ಪಂದ್ಯಾವಳಿ ಸೆ. 5ರಂದು ಮೊದಲ್ಗೊಳ್ಳಲಿದೆ. ಅನಂತರ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಚೆನ್ನೈಯಲ್ಲಿ (ಸೆ. 19-23) ಮತ್ತು ದ್ವಿತೀಯ ಟೆಸ್ಟ್ ಕಾನ್ಪುರದಲ್ಲಿ ನಡೆಯಲಿದೆ (ಸೆ. 27-ಅ. 1).