ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳು ಇದೀಗ ದೆಹಲಿ ಅಂಗಳ ತಲುಪಿದೆ.ನಿನ್ನೆ ದೆಹಲಿಗೆ ತೆರಳಿದ್ದ ಭಿನ್ನಮತೀಯ ಮುಖಂಡರಾದ ಶಾಸಕ ರಮೇಶ್ ಜಾರಕಿಹೊಳಿ ಮತ್ತಿತರರು ನಿನ್ನೆ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಅವರೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ಬಗ್ಗೆ ಇರುವ ತಮ್ಮ ಅಸಮಾಧಾನ ಹಾಗೂ ರಾಜ್ಯದ ಬಿಜೆಪಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ರಮೇಶ್ ಜಾರಕಿಹೊಳಿ ಅವರು ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವರಿಷ್ಠರಿಗೆ ರಾಜ್ಯದ ಪಕ್ಷದ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇವೆ. ಅವರಿಂದ ನಮಗೆ ಶಬ್ಬಾಸ್ಗಿರಿ ದೊರೆತಿದೆ. ರಾಜ್ಯಾಧ್ಯಕ್ಷರ ಮಾದರಿಯಲ್ಲಿ ನಾವು ಮಾತನಾಡಿಲ್ಲ. ನಮ್ಮ ಅಭಿಪ್ರಾಯವನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ ಎಂದಿರುವ ಅವರು, ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ದೊರೆಯಲಿದೆ. ರಾಜ್ಯಾಧ್ಯಕ್ಷರ ಚುನಾವಣೆ ಇರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ಏನು ಮಾತನಾಡುವುದಿಲ್ಲ. ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿ ತಲೆ ಬಾಗುತ್ತೇವೆ ಎಂದಿದ್ದಾರೆ.
ವಿಜಯೇಂದ್ರ ಕರ್ಮಕಾಂಡದ ಬಗ್ಗೆ ಮಾತನಾಡಲು ಇಚ್ಛಿಸದ ಅವರು, ಈ ಬಗ್ಗೆ ಯತ್ನಾಳ್ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಭಿನ್ನಮತೀಯ ಪಾಳಯದಲ್ಲಿ ಗುರುತಿಸಿಕೊಂಡಿರುವ ಮಾಜಿಸಚಿವ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿಯ ರಾಷ್ಟ್ರೀಯ ಪ್ರಧಾನಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಭಿನ್ನರ ಪಾಳಯದ ಪ್ರಮುಖ ನಾಯಕರಾಗಿ ಹೊರ ಹೊಮ್ಮಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ಸಂಜೆ ಬೆಂಗಳೂರಿನಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಇನ್ನು ದೆಹಲಿಯಲ್ಲಿ ಬೀಡು ಬಿಟ್ಟು, ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಉದ್ದೇಶದಿಂದಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಬಿಜೆಪಿ ಘಟಕ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ ಮೂಲಕ ಸಂಘಟನಾತ್ಮಕವಾದ 39 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವ ಬಿಜೆಪಿ, ಸದ್ಯದಲ್ಲೇ ಚುನಾವಣೆ ನಡೆಸಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.