ಬೆಂಗಳೂರು : ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಆನೇಕಲ್ನ ದೊಡ್ಡಹಾಗಡೆ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ದೊಡ್ಡಹಾಗಡೆ ಗ್ರಾಮದ ರಾಮಚಂದ್ರಪ್ಪ (45) ಮೃತಪಟ್ಟವರು, ಅಕ್ಕಪಕ್ಕದ ನಿವಾಸಿಗಳ ಮಧ್ಯೆ ನಡೆದ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಮಚಂದ್ರಪ್ಪ ಸಾವನ್ನಪ್ಪಿದ್ದಾರೆ.ರಾಮಚಂದ್ರಪ್ಪ ಸ್ವಂತ ಟ್ರಾಕ್ಟರ್ ಇಟ್ಟುಕೊಂಡಿದ್ದರು. ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಪಕ್ಕದ ಮನೆಯ ನಿವಾಸಿಗಳ ಜೊತೆ ಗಲಾಟೆಯಾಗಿತ್ತು.
ಮಹಿಳೆಯರು ಗುಂಪು ಕಟ್ಟಿಕೊಂಡು ರಾಮಚಂದ್ರಪ್ಪ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ವೇಳೆ ಹಲ್ಲೆಯಿಂದ ನೆಲಕ್ಕೆ ಉರುಳಿ ಬಿದ್ದಿದ್ದ. ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಿಸದೇ ರಾಮಚಂದ್ರಪ್ಪ ಮೃತಪಟ್ಟಿದ್ದಾರೆ.