ನವದೆಹಲಿ: ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ತಮ್ಮ ಪಕ್ಷವು ‘ಪೂಜಾರಿ- ಗ್ರಂಥಿ ಸಮ್ಮಾನ್ ಯೋಜನೆ’ಯನ್ನು ಪ್ರಾರಂಭಿಸಲಿದೆ. ದೇವಾಲಯದ ಅರ್ಚಕರು ಮತ್ತು ಗುರುದ್ವಾರಗಳ ಗ್ರಂಥಿಗಳಿಗೆ ಮಾಸಿಕ 18,000 ರೂ. ಭತ್ಯೆ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಸೋಮವಾರ ಘೋಷಿಸಿದ್ದಾರೆ.
ಮುಂದಿನ ವರ್ಷ ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಮುನ್ನ ಈ ಘೋಷಣೆ ಹೊರಬಿದ್ದಿದ್ದು, ಸತತ ನಾಲ್ಕನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಎಎಪಿ ಪ್ರಯತ್ನ ನಡೆಸುತ್ತಿದೆ. ಹಲವು ವಿಶೇಷ ಯೋಜನೆಗಳನ್ನು ಘೋಷಿಸುತ್ತಿದೆ.
‘ಪೂಜಾರಿಗಳು ಮತ್ತು ಗ್ರಂಥಿಗಳು ನಮ್ಮ ಸಮಾಜದ ಪ್ರಮುಖ ಭಾಗವಾಗಿದ್ದಾರೆ. ಆದರೆ, ಅವರನ್ನು ನಿರ್ಲಕ್ಷ್ಯಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ, ನಾವು ಅವರನ್ನು ಬೆಂಬಲಿಸಲು ಈ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಈ ಯೋಜನೆ ಅಡಿಯಲ್ಲಿ ಅವರಿಗೆ ತಿಂಗಳಿಗೆ 18,000 ರೂ. ಭತ್ಯೆಯನ್ನು ನೀಡಲಾಗುತ್ತದೆ. ಈ ಯೋಜನೆಗೆ ನಾಳೆಯಿಂದಲೇ ನೋಂದಣಿ ಪ್ರಾರಂಭವಾಗುತ್ತದೆ’ ಎಂದು ಕೇಜ್ರಿವಾಲ್ ಹೇಳಿದರು.
ಮಂಗಳವಾರ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ, ಅಲ್ಲಿನ ಅರ್ಚಕರ ನೋಂದಣಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವುದಾಗಿ ತಿಳಿಸಿದರು.