ದೆಹಲಿ ವಿಧಾನಸಭೆಯ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆಬ್ರವರಿ 5ರಂದು ಮತದಾನ ನಡೆಯಲಿದ್ದು ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಉಪಸ್ಥಿತರಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಜೊತೆಗೆ ಚುನಾವಣಾ ಆಯೋಗವು ಚುನಾವಣಾ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಿದೆ. ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಫಲಿತಾಂಶವನ್ನು ಫೆಬ್ರವರಿ 8 ರಂದು ಅಂದರೆ ಚುನಾವಣೆಯ 3 ದಿನಗಳ ನಂತರ ಪ್ರಕಟವಾಗಲಿದೆ.
ಕಳೆದ ಸೋಮವಾರ ಚುನಾವಣಾ ಆಯೋಗವೂ ದೆಹಲಿಯ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸಿತ್ತು. ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಒಟ್ಟು 1 ಕೋಟಿ 55 ಲಕ್ಷದ 24 ಸಾವಿರದ 858 ನೋಂದಾಯಿತ ಮತದಾರರಿದ್ದಾರೆ. ಅದೇ ವೇಳೆ ಪುರುಷ ಮತದಾರರ ಸಂಖ್ಯೆ 84 ಲಕ್ಷ 49 ಸಾವಿರದ 645 ಹಾಗೂ ಮಹಿಳಾ ಮತದಾರರ ಸಂಖ್ಯೆ 71 ಲಕ್ಷ 73 ಸಾವಿರದ 952. ಈ ಬಾರಿ ದೆಹಲಿಯಲ್ಲಿ ಯುವ ಮತದಾರರ ಸಂಖ್ಯೆ 25.89 ಲಕ್ಷವಿದ್ದು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 2.08 ಲಕ್ಷವಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ವದಂತಿಗಳನ್ನು ಹಬ್ಬಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಯಾವುದೇ ಆಧಾರವಿಲ್ಲದೆ ಹಲವು ಆರೋಪಗಳನ್ನು ಮಾಡಲಾಗಿದೆ. ಇವಿಎಂ ಬಗ್ಗೆಯೂ ವದಂತಿ ಹಬ್ಬಿತ್ತು ಎಂದು ಹೇಳಿದರು.