ನವದೆಹಲಿ: ದೆಹಲಿ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ, AAP ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಲು ಖಲಿಸ್ತಾನಿ ಉಗ್ರರು ಸಂಚು ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ವರದಿಗಳು ಹೇಳಿವೆ. ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ದೇವರು ನನ್ನನ್ನು ಕಾಪಾಡುತ್ತಾನೆ. ದೇವರು ಎಲ್ಲಿಯವರೆಗೂ ಬದುಕಿಸುತ್ತಾನೋ ಅಲ್ಲಿಯವರೆಗೂ ಇರುತ್ತೇನೆ ಎಂದಿದ್ದಾರೆ.
ಫೆಬ್ರವರಿ 5 ರಂದು ನಡೆಯಲಿರುವ ಚುನಾವಣೆಗೆ ನವದೆಹಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಜೀವ ಬೆದರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ದೇವರು ಕಾಪಾಡುತ್ತಾನೆ ಎಂದರು. ನಾಮಪತ್ರಕ್ಕೂ ಮುನ್ನಾ ಕನ್ನಾಟ್ ನ ಪ್ರಾಚೀನ ಹನುಮಂತನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಾತನಾಡಿದ ಅವರು, ದೇವರಿಂದ ರಕ್ಷಿಸಲ್ಪಟ್ಟವರನ್ನು ಯಾರೂ ಹತ್ಯೆ ಮಾಡಲು ಸಾಧ್ಯವಿಲ್ಲ. ದೇವರು ನನ್ನೊಂದಿಗೆ ಇದ್ದಾನೆ ಎಂದರು.
ಜೀವಸೆಲೆ ಇರುವವರೆಗೂ ಬದುಕುತ್ತೇವೆ. ಜೀವಸೆಲೆ ಕೊನೆಯದಾಗ ದೇವರು ಕರೆಯುತ್ತಾನೆ. ಆಗ ಎಲ್ಲರೂ ಹೋಗಬೇಕಾಗುತ್ತದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಹೇಳಿದರು. ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಹೆಚ್ಚಿಸಲು ಪರಿಶೀಲಿಸುತ್ತಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.
ಪಂಜಾಬ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಎರಡರಿಂದ ಮೂವರು ಖಲಿಸ್ತಾನಿ ಉಗ್ರರು ರಾಜಧಾನಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ದೆಹಲಿ ಮಾರ್ಗದಲ್ಲಿ ಸಾಗುತ್ತಿದೆ ಎಂದು ಗುಪ್ತಚರ ವರದಿಗಳು ಹೇಳಿವೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ದೆಹಲಿ ಮತ್ತು ಪಂಜಾಬ್ನಲ್ಲಿ ಸಾಮರಸ್ಯ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಉದ್ದೇಶದಿಂದ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಬೆಂಬಲಿತ ಖಲಿಸ್ತಾನ್ ಪರ ಗುಂಪು ಈ ಸಂಚು ರೂಪಿಸಿದೆ. ಝಡ್-ಪ್ಲಸ್ ಭದ್ರತೆ ಹೊಂದಿರುವ ಕೇಜ್ರಿವಾಲ್ ಅವರಿಗೆ ಹೆಚ್ಚುವರಿಯಾಗಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPFs) 15 ಸಮವಸ್ತ್ರಧಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.