ಹೊಸಕೋಟೆ: ತಾಲೂಕಿನ ದೇವನಗುಂದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಹರೀಶ್ ಡೆಂಗಿ ಜ್ವರವನ್ನು ನಿಯಂತ್ರಿಸಬೇಕಾದ್ದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಜವಾಬ್ದಾರಿಯಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಶುಕ್ರವಾರ ಈಜಿಸ್ ಈಜಿಪ್ಟಿ ಸೊಳ್ಳೆ ನಾಶ ಮಡುವ ದಿನವನ್ನಾಗಿ ಆಚರಿಸಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ನೀರು ಸಂಗ್ರಹಿಸಿರುವ ಸಾಮಗ್ರಿಗಳನ್ನು ಪರಿಶೀಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಲಾಗುವುದು.
ಸಾರ್ವಜನಿಕರು ಬಳಸುವ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಸೊಳ್ಳೆಯು ಒಳ್ಳೆಯ ನೀರಿನಲ್ಲಿಯೇ ಉತ್ಪತ್ತಿಯಾಗುವ ಕಾರಣ ಮನೆಯಲ್ಲಿನ ಸಿಮೆಂಟ್ ತೊಟ್ಟಿ, ಡ್ರಂ, ಬ್ಯಾರೆಲ್, ಬಕೆಟ್, ಕೊಡಗಳಲ್ಲಿ ನೀರನ್ನು ಶೇಖರಿಸಿದ್ದಲ್ಲಿ ಮುಚ್ಚಿಡಬೇಕು ಹಾಗೂ ಕನಿಷ್ಠ ವಾರಕ್ಕೊಮ್ಮೆ ಇವುಗಳನ್ನು ಸ್ವಚ್ಛಗೊಳಿಸಬೇಕು.
ಸೊಳ್ಳೆಯ ಮೊಟ್ಟೆಗಳು ನೀರಿಲ್ಲದಿದ್ದರೂ ಸಹ ಒಂದು ವರ್ಷ ಜೀವಂತವಾಗಿರುತ್ತವೆ. ಮನೆ, ಶಾಲಾ ಕಾಲೇಜು, ಕಚೇರಿ, ಅಂಗನವಾಡಿ, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಮುಂಜಾಗ್ರತೆ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಡೆಂಗಿ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿಖಿಲೇಶ್, ಆರೋಗ್ಯ ಇಲಾಖೆಯ ಪುಷ್ಪ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಗಳನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಲಾಯಿತು.