ದೇವನಹಳ್ಳಿ : ಅರುಂಧತಿ ಸೇವಾ ಸಂಸ್ಥೆಯವರು ಈ ಒಂದು ಸಮಾಜಮುಖಿ ಕೆಲಸವಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಶೈಕ್ಷಣಿಕವಾಗಿ ಮುಂದುವರೆಯಲು ತಮ್ಮ ಕೈಲಾದ ಶೈಕ್ಷಣಿಕ ಪರಿಕರ ಸೇರಿದಂತೆ ಧನಸಹಾಯ ನೀಡುತ್ತಿರುವುದು ಸಂತಸಕರವಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಬೆಂ.ಗ್ರಾ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಅವರು ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅರುಂಧತಿ ಸೇವಾ ಸಂಸ್ಥೆಯ 12 ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಅರುಂದತಿ ಸೇವಾ ಸಂಸ್ಥೆಯ ಕಾರ್ಯ ಮೆಚ್ಚತಕ್ಕ ವಿಷಯ, ಮಕ್ಕಳ ಕಲಿಕೆಗೆ ಸಹಕಾರಿ, ಉನ್ನತ ತರಭೇತಿ ಪಡೆಯಲು ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ, ಈ ಸಂಸ್ಥೆಯು ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು ನಮ್ಮ ಸಹಕಾರವು ಇರಲಿದೆ ಎಂದು ಶುಭಕೋರಿದರು.
ದೇವನಹಳ್ಳಿ ತಾಲ್ಲೂಕಿನ 30 ಪಂಚಾಯತಿಗಳಲ್ಲಿ ಈಗಾಗಲೇ 10 ಪಂಚಾಯತಿಗಳಲ್ಲು ಸಿ.ಎಸ್.ಆರ್ ಅನುದಾನದಡಿ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು ಮಕ್ಕಳ ಕಲಿಕೆಗೆ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾಂಗಣ, ಮುಂತಾದ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣವಾಗಲಿದೆ ನಾನು ಕೇಂದ್ರದಲ್ಲಿ ಸಚಿವನಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ಸಲಹಾಸಮಿತಿಯ ಸದಸ್ಯನಾಗಿ ನಮ್ಮ ರಾಜ್ಯದಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ ಒತ್ತನ್ನು ನೀಡಿ ಮೊರಾರ್ಜಿ, ರಾಜೀವ್ಗಾಂಧಿ ವಸತಿ ಶಾಲೆಗಳ ನಿರ್ಮಾಣಕ್ಕೆ ಮುಂದಾದೆ ವಸತಿ ಶಾಲೆಗಳು ಎಲ್ಲಾ ವರ್ಗದ ಮಕ್ಕಳ ಕಲಿಕೆಗೆ ಸಹಕಾರವಾಗುವ ರೀತಿಯಲ್ಲಿ ಯೋಜನೆ ರೂಪಿಸಿದ್ದೇವೆ, ಆವತಿಯಲ್ಲಿ 10ಎಕರೆ ಜಮೀನಿನಲ್ಲಿ ಕೆಂಪೇಗೌಡರ ಸ್ಮಾರಕ ಹಾಗೂ ಅವರ ಸಾಧನೆಗಳ ಪೂರ್ಣವಾದ ಮಾಹಿತಿಯಲ್ಲಿ ನಿರ್ಮಿಸಲು ನಾವು 10ಕೋಟಿ ರೂಗಳ ವೆಚ್ಚದಲ್ಲಿ ಯೋಜನೆ ರೂಪಿಸಿದ್ದೇವೆ.ಎಂದರು.
ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯದವರಿಗೂ 100 ಬೋರ್ವೆಲ್ ಗಳನ್ನು ಕೊರಿಸಲು ಮಂಜೂರು ಮಾಡಿಸುತ್ತೇನೆ ಎಂದರು.
ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಶ್ರೀ ಅರುಂದತಿ ಸೇವಾ ಟ್ರಸ್ಟ್ 2011ರಲ್ಲಿ ಪ್ರಾರಂಭವಾಗಿ 12ವರ್ಷಗಲಿಂದಲೂ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಾ ಎಲ್ಲಾ ಸಮುದಾಯದ ಮಕ್ಕಳಿಗೆ ಶೈಕ್ಷಣಿಕವಾಗಿ ಮುಂದೆ ಬರಲು ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿರುವುದು ಅವರ ಕಾರ್ಯ ಮೆಚ್ಚಲೇ ಬೇಕು,
ಆಗ ನಾನು ಶಾಸಕನಾಗಿರಲಿಲ್ಲ, ಆಗಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ ಇದುವರೆಗೆ 3116 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ ಸಂಸ್ಥೆ, ನಮ್ಮ ದೇವನಹಳ್ಳಿ ಕ್ಷೇತ್ರದಲ್ಲಿ ಅನೇಕ ಕೆಲಸಗಳು ಆಗಬೇಕಿವೆ, ಮೂಲಬೂತ ಸೌಕರ್ಯವಿಲ್ಲದ ಅಂಬೇಡ್ಕರ್ ಭವನದ ಕೆಲಸ ಪೂರ್ಣಗೊಂಡಿಲ್ಲ, ಬಾಬು ಜಗಜೀವನ್ರಾಮ್ ಭವನ, ಮಹರ್ಷಿ ವಾಲ್ಮೀಕಿ ಭವನಗಳು ಉದ್ಘಾಟನೆಗೊಳ್ಳದೇ ಹಾಗೆಯೇ ಇವೆ, ಮಾನ್ಯ ಸಚಿವರು ಬೇಗ ಇವೆಲ್ಲಾ ಪೂರ್ಣಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬಯಪಾ ಅಧ್ಯಕ್ಷರಾದ ದ್ಯಾವರಹಳ್ಳಿ ಶಾಂತಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಜಗನ್ನಾಥ್, ಬಿದಲೂರು ಗ್ರಾ.ಪಂ. ಅಧ್ಯಕ್ಷ ಎಸ್.ಪಿ.ಮುನಿರಾಜು, ಮಾತಂಗ ಸಂಸ್ಥೆಯ ಅಧ್ಯಕ್ಷರಾದ ಮುನಿರಾಜು, ಬುಳ್ಳಹಳ್ಳಿ ರಾಜಪ್ಪ, ಎಸ್.ಮಹೇಶ್ ಆಧಿಜಾಂಭವ ಸದಸ್ಯರಾದ ಶ್ರೀನಿವಾಸ್, ನರಸಿಂಹಮೂರ್ತಿ ಮಂಜುನಾಥ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಾಲಿಗೆ ಮುನಿರಾಜು, ಗೌ|| ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಕೆ.ಮಂಜುನಾಥ್, ಉಪಾಧ್ಯಕ್ಷ ಸಿ.ಮುನಿಕೃಷ್ಣಪ್ಪ, ಕಾರ್ಯದರ್ಶಿ ಡಿ.ಎನ್. ಅನಿಲ್, ಖಜಾಂಚಿ ವೇಣುಗೋಪಾಲ್, ಸಹಕಾರ್ಯದರ್ಶಿ ವಿ.ಮುನಿರಾಜು, ನಿರ್ದೇಶಕರಾದ ಜಾಲಿಗೆ ಗ್ರಾ.ಪಂ. ಅಧ್ಯಕ್ಷ ಎಸ್.ಎಂ. ಆನಂದಕುಮಾರ್, ಅಮರನಾರಾಯಣಪ್ಪ, ಎಂ. ವೆಂಕಟೇಶ್, ಎಂ. ಹರ್ಷನಾಥ್, ಡಿ. ಮುನಿಕೃಷ್ಣಪ್ಪ. ಎನ್. ವೆಂಕಟಪ್ಪ, ಎನ್. ನರಸಿಂಹಮೂರ್ತಿ, ಸಿ. ನಾಗೇಶ್, ಸಿ. ಶ್ರೀನಿವಾಸ್, ಎನ್.ಮುನಿರಾಜಪ್ಪ ಉಪಸ್ಥಿತರಿದ್ದರು.