ನವದೆಹಲಿ: ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ತಮ್ಮ ಮಗನ 10 ವರ್ಷಗಳ ಕ್ರಿಕೆಟ್ ಜೀವನವನ್ನು ಹಾಳು ಮಾಡಿದರು ಎಂದು ಸಂಜು ಸ್ಯಾಮ್ಸನ್ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿರುವ ಭಾರತದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇದೀಗ ಬೇಡದ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದು, ಸಂಜು ಅವರ ತಂದೆ ನೀಡುರುವ ವಿವಾದಾತ್ಮಕ ಹೇಳಿಕೆ ವ್ಯಾಪಕ ವೈರಲ್ ಆಗುತ್ತಿದೆ.
ಕೋಚ್ ರಾಹುಲ್ ದ್ರಾವಿಡ್, ಮಾಜಿ ನಾಯಕರಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಮಗನ 10 ವರ್ಷವನ್ನು ಹಾಳು ಮಾಡಿದ್ದಾರೆ ಎಂದು ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ದೊಡ್ಡ ಆರೋಪ ಮಾಡಿದ್ದು, ‘ನನ್ನ ಮಗನ 10 ವರ್ಷಗಳ ವೃತ್ತಿಜೀವನವನ್ನು 3-4 ಮಂದಿ ಹಾಳು ಮಾಡಿದ್ದಾರೆ. ಧೋನಿ, ವಿರಾಟ್, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ನನ್ನ ಮಗನ 10 ವರ್ಷಗಳನ್ನು ಹಾಳು ಮಾಡಿದರು. ಅವರು ನನ್ನ ಮಗನನ್ನು ನೋಯಿಸಿದ್ದಾರೆ. ಆದರೀಗ ನನ್ನ ಮಗ ಈ ಬಿಕ್ಕಟ್ಟಿನಿಂದ ಚೇತರಿಸಿಕೊಂಡಿದ್ದಾನೆ ಎಂದಿದ್ದಾರೆ.
ಕ್ರೀಸ್ ಶ್ರೀಕಾಂತ್ ರಿಂದಲೂ ನೋವಾಗಿದೆ
ಇದೇ ವೇಳೆ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಅವರ ಮೇಲೂ ವಿಶ್ವನಾಥ್ ವಾಗ್ದಾಳಿ ನಡೆಸಿದ್ದು, ‘ಕೆ. ಶ್ರೀಕಾಂತ್ ಅವರ ಕಾಮೆಂಟ್ ನನಗೆ ತುಂಬಾ ನೋವುಂಟು ಮಾಡಿದೆ. ಬಾಂಗ್ಲಾದೇಶದಂತಹ ತಂಡದ ವಿರುದ್ಧ ಸಂಜು ಸ್ಯಾಮ್ಸನ್ ಶತಕ ಸಿಡಿಸಿದ್ದಾರೆ. ಆದರೆ ಯಾವುದೇ ತಂಡದ ವಿರುದ್ಧ ಬಾರಿಸಿದರೂ, ಶತಕ ಶತಕವೇ. ಸಂಜು ಒಬ್ಬ ಕ್ಲಾಸಿಕ್ ಆಟಗಾರ. ಅವರ ಬ್ಯಾಟಿಂಗ್ ಸಚಿನ್ ಮತ್ತು ರಾಹುಲ್ ದ್ರಾವಿಡ್ ಅವರಂತೆ ಶ್ರೇಷ್ಠವಾಗಿದೆ ಎಂದಿದ್ದಾರೆ.