ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪ್ರಥಮ ಪುತ್ರ ಸಮಿತ್ ಬಳಿಕ ಇದೀಗ ಅವರ ಮತ್ತೊಬ್ಬ ಪುತ್ರ ಅನ್ವಯ್ ಅವರು ಸಹ ತಮ್ಮಲ್ಲಿರುವ ಕ್ರಿಕೆಟ್ ಕ್ಷಮತೆಯನ್ನು ಪ್ರದರ್ಶಿಸಿದ್ದಾರೆ. ಆಂಧ್ರಪ್ರದೇಶದ ಮುಳಪಾಡುವಿನಲ್ಲಿ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳ ನಡುವೆ ನಡೆದ ವಿಜಯ್ ಮರ್ಚಂಟ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಪರ ಅವರು ಅಜೇಯ ಶತಕ ಬಾರಿಸಿದ್ದಾರೆ.
16ರ ಹರೆಯದ ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ ಅವರ ಅಜೇಯ 100 ರನ್ ಗಳ ನೆರವಿನಿಂದ ಕರ್ನಾಟಕ ತಂಡ 123.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 441 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.ಸ್ಯಮಂತಕ್ ಜೊತೆ ಬೃಹತ್ ಜೊತೆಯಾಟ: 3ನೇ ವಿಕೆಟ್ ಗೆ ಅನ್ವಯ್ ಅವರು ಸ್ಯಮಂತಕ್ ಅನಿರುದ್ಧ್ (76) ಅವರ ಜೊತೆ 167 ರನ್ ಗಳ ಜೊತೆಯಾಟವಾಡಿದರು. ಜೊತೆಗೆ ನಾಲ್ಕನೇ ವಿಕೆಟ್ ಗೆ ಸುಕೃತ್ (33) ಅವರ ಜೊತೆಗೆ ಮುರಿಯದ 43 ರನ್ ಗಳ ಜೊತೆಯಾಟವಾಡಿದರು.
ದ್ರಾವಿಡ್ ಪುತ್ರ ಸಮಿತ್ ಮಿಂಚಿನ ಪ್ರದರ್ಶನ: ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನ್ವಯ್ ಅವರು 153 ಎಸೆತಗಳಿಂದ ಅಜೇಯ 100 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 10 ಬೌಂಡರಿ, 2 ಸಿಕ್ಸರ್ ಗಳಿದ್ದವು. ಜಾರ್ಖಂಡ್ ಬೌಲರ್ ಗಳು ಅವರನ್ನು ಔಟ್ ಮಾಡಲು ಅರಿಯದೆ ಸುಸ್ತಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಜಾರ್ಖಂಡ್ ತಂಡ 128.4 ಓವರ್ ಗಳಲ್ಲಿ 387 ರನ್ ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಕರ್ನಾಟಕ ತಂಡ 51 ರನ್ ಗಳ ಮುನ್ನಡೆ ಸಾಧಿಸಿತು. ಪಂದ್ಯ ಡ್ರಾ ಆಗಿದ್ದರಿಂದ ಕರ್ನಾಟಕಕ್ಕೆ ಪ್ರಥಮ ಇನ್ನಿಂಗ್ಸ್ ಮುನ್ನಡೆ ಹಿನ್ನೆಲೆಯಲ್ಲಿ 3 ಅಂಕ ಮತ್ತು ಜಾರ್ಖಂಡ್ ತಂಡಕ್ಕೆ 1 ಅಂಕ ಲಭಿಸಿತು.