ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸತತ ಎರಡನೇ ದಿನವೂ ಮಳೆಯ ಕಾಟವಾಗಿದೆ. ಇಂದೂ ಮಳೆಯಿಂದಾಗಿ ಇನ್ನೂ ಪಂದ್ಯ ಆರಂಭವಾಗಿಲ್ಲ. ಮಳೆಯಿಂದಾಗಿ ನಿನ್ನೆ ಮೊದಲ ದಿನ ತಡವಾಗಿ ಪಂದ್ಯ ಆರಂಭವಾಯಿತು.
ಇಂದೂ ಬೆಳಿಗ್ಗೆಯೇ ಕಾನ್ಪುರ ಮೈದಾನದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದುವರೆಗೆ ಪಂದ್ಯ ಆರಂಭವಾಗಿಲ್ಲ. ಅಂಪಾಯರ್ ಗಳು ಈಗಷ್ಟೇ ಮೈದಾನಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇನ್ನೂ ಪಂದ್ಯ ಎಷ್ಟೊತ್ತಿಗೆ ಆರಂಭವಾಗಲಿದೆ ಎನ್ನುವುದು ಖಚಿತವಾಗಿಲ್ಲ.ನಿನ್ನೆ ಮೊದಲ ದಿನದಂತ್ಯಕ್ಕೂ ಮಂದ ಬೆಳಕಿನಿಂದಾಗಿ ನಿಗದಿತ ಸಮಯಕ್ಕಿಂತ ಮೊದಲೇ ದಿನದಾಟ ಮುಗಿಸಲಾಯಿತು.
ನಿನ್ನೆಯ ಇಡೀ ದಿನ ಕೇವಲ 35 ಓವರ್ ಗಳಷ್ಟೇ ಪಂದ್ಯ ನಡೆದಿದೆ. ಮೊದಲ ದಿನ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಆಕಾಶ್ ದೀಪ್ 2, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಕಬಳಿಸಿದ್ದರು. ಹವಾಮಾನ ವರದಿ ಪ್ರಕಾರ ಮೊದಲ ಎರಡು ದಿನಗಳು ಮಳೆಯಿಂದಾಗಿ ಅಡಚಣೆಯಾಗಬಹುದು ಎನ್ನಲಾಗಿತ್ತು. ಅದರಂತೆ ಎರಡೂ ದಿನದಾಟದಲ್ಲೂ ಮಳೆಯದ್ದೇ ಕಾರುಬಾರು ಎಂಬ ಪರಿಸ್ಥಿತಿಯಾಗಿದೆ. ಕೆಲ ಹೊತ್ತಿಲ್ಲೇ ಪಂದ್ಯ ಆರಂಭವಾಗುವ ಆಶಾಭಾವವಿದೆ.