ಚಂಡೀಗಢ: ಕರ್ತಾರ್ಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಾರ್ಥಿಗಳಿಗೆ ಆಪರೇಷನ್ ಬ್ಲೂ ಸ್ಟಾರ್ ವಿಡಿಯೋಗಳನ್ನು ತೋರಿಸಿ ದ್ವೇಷ ಹರುಡುತ್ತಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಭಾರತ ಮುಂದಾಗಿದೆ.
ಸಿಖ್ ಯಾತ್ರಾರ್ಥಿಗಳಲ್ಲಿ ದೇಶ ಭಕ್ತಿ ಹೆಚ್ಚಿಸಲು ಹಾಗೂ ನಮ್ಮ ಸೇನೆಯ ಧೈರ್ಯ,ಸ್ಥೈರ್ಯ ಪ್ರದರ್ಶಿಸಲು ಗಡಿ ಭದ್ರತಾ ಪಡೆ (ಬಿಎಸ್ಎಫ್) ದೇಶಭಕ್ತಿ ಸಿನಿಮಾಗಳನ್ನು ಪ್ರದರ್ಶಿಸಲು ಕಾರ್ಯವಿಧಾನಗಳನ್ನು ರೂಪಿಸಿದೆ ಎಂದು ತಿಳಿದುಬಂದಿದೆ.
ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಾರ್ಥಿಗಳಲ್ಲಿ ಭಾರತ ವಿರೋಧಿ ಭಾವನೆಯನ್ನು ಹುಟ್ಟುಹಾಕಲು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಮತ್ತು ಪಾಕಿಸ್ತಾನ ಆಪರೇಷನ್ ಬ್ಲೂ ಸ್ಟಾರ್ ವಿಡಿಯೋಗಳನ್ನು ತೋರಿಸುತ್ತಿದ್ದು, ಭಾರತಕ್ಕೆ ಮರಳಿದ ಬಳಿಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನೂ ನೀಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನದ ಈ ದುರ್ವರ್ತನೆಗೆ ಬಿಎಸ್ಎಫ್ ಈ ಹಿಂದೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ವಿಡಿಯೋ ಪ್ರದರ್ಶನವನ್ನು ಪಾಕಿಸ್ತಾನ ನಿಲ್ಲಿಸಿತ್ತು. ಆದರೀಗ ಮತ್ತೆ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಸಲುವಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಖ್ ಯಾತ್ರಾರ್ಥಿಗಳಲ್ಲಿ ದೇಶದ ಭಕ್ತಿಯನ್ನು ಹೆಚ್ಚಿಸಲು ಹಲವು ಕ್ರಮಗಳ ರೂಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.