ಬೆಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದೇಸಮ ಮಳೆ ಸುರಿಯುತ್ತಿದೆ ಮತ್ತು ಈ ಪ್ರದೇಶಗಳ ನದಿ ಮತ್ತು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಎರಡು ಜಿಲ್ಲೆಗಳಲ್ಲಿ ಹಲವಾರು ಪ್ರವಾಸಿ ತಾಣಗಳಿರುವುದರಿಂದ ಮಳೆಗಾಲ ಶುರುವಾದರೂ ಪ್ರವಾಸಿಗರು ಜಿಲ್ಲೆಗಳಿಗೆ ಭೇಟಿ ನೀಡುವುದು ನಿಂತಿಲ್ಲ. ಇದೇ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸೂಚನೆಯೊಂದನ್ನು ಹೊರಡಿಸಿ ಜಿಲ್ಲೆಯ ಬೆಟ್ಟ ಪ್ರದೇಶಗಳು ಮತ್ತು ಜಲಪಾತಗಳ ಕಡೆ ಹೋಗದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುವುದು ನಿಲ್ಲುತ್ತಿಲ್ಲ.
ನಾವು ಈಗಾಗಲೇ ವರದಿ ಮಾಡಿರುವಂತೆ ಕರಾವಳಿ ಪ್ರದೇಶದ ನದಿಗಳಾದ ನೇತ್ರಾವತಿ, ಕುಮಾರಧಾರ, ನಂದಿನಿ ಮೊದಲಾದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ ಹಾಗೂ ಕೆಲ ಸೇತುವೆಗಳು ಮುಳುಗಡೆಯಾಗಿವೆ. ಯುವಕರು ಹುಚ್ಚು ಸಾಹಸಗಳನ್ನು ಮಾಡುವ ಪ್ರವೃತ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಸೂಚನೆಯನ್ನು ಹೊರಡಿಸಿದೆ.