ಕನ್ನಡ ಹರಿದಾಸ ಪರಂಪರೆಯ ಇತಿಹಾಸದಲ್ಲಿ ಶ್ರೀರಾಮದಾಸರ ಸ್ಥಾನ ಅಜರಾಮರ. ಅವರ ಸಾಹಿತ್ಯ ಕೊಡುಗೆ ಅನುಪಮ. ಭಕ್ತಿ, ಜ್ಞಾನ, ಅನುಭವ, ಅನುಭಾವಗಳ ಅದ್ಭುತ ಸಹಸ್ಪಂದನ. ಹೃದಯವಂತಿಕೆ ಸಾಕ್ಷಾತ್ಕಾರದಿಂದ ಅಂತರ್ ದರ್ಶನ ಇವೆಲ್ಲ ಶ್ರೀರಾಮದಾಸರ ಸಾಹಿತ್ಯದಲ್ಲಿ ಕಂಡು ಬರುವ ವೈಶಿಷ್ಟ.
`ಶ್ರೀರಾಮದಾಸರು’ ಅಪರೂಪದ ಹರಿದಾಸರು. ಇಸ್ಲಾಂ ಧರ್ಮಕ್ಕೆ ಸೇರಿದ ಇವರು ದ್ವೈತ ಸಿದ್ಧಾಂತಕ್ಕೆ ಅನುಗುಣವಾಗಿ ಸಾಹಿತ್ಯ ರಚನೆ ಮಾಡುವದರ ಮೂಲಕ ಧಾರ್ಮಿಕ ಭಾವೈಕ್ಯದ ಹರಿಕಾರರು. ಆಧುನಿಕ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೀರ್ತನೆ, ಉಗಾಭೋಗ,ಶತಾಷ್ಟಕಗಳ ಮೂಲಕ ಅಪಾರ ಕಾಣಿಕೆ ನೀಡಿ ಧಾರ್ಮಿಕ ಮೇರೆಯನ್ನು ಮೀರಿದವರು.
ಶ್ರೀರಾಮದಾಸರು ಅತ್ಯಪೂರ್ವ ಕೀರ್ತನೆಗಳನ್ನು ರಚಿಸಿದರೆನ್ನುವದು ಒಂದು ಮಹತ್ವವಾದ ಸಂಗತಿ. ಅವರದು ರಾಯಚೂರು ಜಿಲ್ಲೆಯ ಜೋಳದಡಿಗೆ ಜನ್ಮಸ್ಥಳ. ಹಂಪಿಯಲ್ಲಿ ಶ್ರೀರಾಮದಾಸರು “ಶ್ರೀರಾಮ ” ಅಂಕಿತದಿಂದ, ಶ್ರೀರಾಮವಧೂತರಿಂದ ಪಡೆದ ಗುರೂಪದೇಶದಿಂದ ಅವರ ಮನಸ್ಸು ಆಧ್ಯಾತ್ಮದತ್ತ ತಿರುಗಿತು.
ಗೋನವಾರ, ಲಿಂಗದಹಳ್ಳಿ ಅವರ ಓಡಾಟದ ತಾಣಗಳು. ಗೋನವಾರ ಗ್ರಾಮದಲ್ಲಿದ್ದ ವೈದಿಕ ಬ್ರಾಹ್ಮಣ ಜೋಯಿಸ್ ಮನೆತನದ ವೇ. ಮೂ. ವೆಂಕಟಾಭೀಮಾಚಾರ್ಯ ಹಾಗೂ ಹನುಮಂತಚಾರ್ಯ ಅಪ್ರತಿಮ ಸಂಗೀತಪಟುಗಳು ಹಾಗೂ ಕೀರ್ತನಾಪಟುಗಳು ಹಾಗೂ ಕೀರ್ತನಕಾರರು. ಇವರ ಒಡನಾಟದಿಂದ ಸಂಗೀತದ ಒಲವು ಹುಟ್ಟಿ ದಾಸ ಸಾಹಿತ್ಯದ ಅಭ್ಯಾಸ ಮಾಡಿದರು.
ಅವರು ಹರಿಪ್ರೇರಣೆಯಿಂದ ‘ಶ್ರೀರಾಮ’ ಅಂಕಿತದಲ್ಲಿ ಕೃತಿಗಳನ್ನು ರಚಿಸಿ ರಾಮದಾಸರೆಂದು ಹೆಸರಾದವರು. ಅವರ 773 ಕೃತಿಗಳ ಸಂಕಲನ ಮೈಸೂರು ವಿಶ್ವವಿದ್ಯಾಲಯದ ಅಧ್ಯಯನ ಪೀಠದಿಂದ ಪ್ರಕಟವಾಗಿವೆ. 92 ಉಗಾಭೋಗಗಳು ಉಳಿದವು ಕೀರ್ತನೆಗಳು.ಎಲ್ಲ ದಾಸರಂತೆ ಅಂತರಂಗ ದರ್ಶನದ ಆರ್ತನಾದದ ಕೃತಿಗಳು. ತತ್ವಪ್ರತಿಪಾದನೆ, ಭಕ್ತಿಪರ ಹಾಗೂ ಸಾಮಾಜಿಕ ಕಳಕಳಿಯ ಕೃತಿಗಳನ್ನು ರಚಿಸಿದ್ದಾರೆ. ಹರಿಸರ್ವೋತ್ತಮ ತ್ವವನ್ನು ಖಚಿತವಾಗಿ ಹೇಳುವಂತೆ ಜಾತಿ, ಮತ, ಕುಲ,ಮಡಿ ಕಂದಾಚಾರಗಳನ್ನು ಖಾರವಾಗಿ ಲೇವಡಿ ಮಾಡುವಕೃತಿಗಳು ಇವೆ.
ಲಿಂಗಸೂರು ತಾಲೂಕಿನ ಬುದ್ಧಿನ್ನಿ ಗ್ರಾಮದಲ್ಲಿರುವ ಶ್ರೀ ಮಾಧವತೀರ್ಥರ ವೃಂದಾವನ ಮಠದ ದ್ವಾರದ ನೀಲನಕ್ಷೆಯನ್ನು ಸ್ವತಃ ಶ್ರೀರಾಮದಾಸರೇ ಹಾಕಿದ್ದು. ಅವರ ಪ್ರಾಮಾಣಿಕ ಪ್ರಯತ್ನ ಕ್ಕೆ ಮಠದ ಮಹಾದ್ವಾರ ಅವರ ನೆನಪನ್ನು ತರುತ್ತಿದೆ. ಮೂವತ್ತು ವರ್ಷಗಳ ಅವ್ಯಾಹತ ಹರಿಸೇವೆಯಲ್ಲಿ ಪರಿಶುದ್ಧರಾದ ಶ್ರೀರಾಮದಾಸರು ಮಾರ್ಗಶಿರ ಬಹುಳ ದಶಮಿಯಂದು ಲಿಂಗದಹಳ್ಳಿಯಲ್ಲಿಯೇ ತಮ್ಮ ದೇಹವನ್ನು ತ್ಯಜಿಸಿದರು. ಶ್ರೀರಾಮದಾಸರ ಸಮಾಧಿಯ ಸುತ್ತಲೂ ತುಳಸಿಯ ವನಾಂತರವೇ ಉಂಟಾಗಿದೆ. ಶ್ರೀರಾಮದಾಸರ ಗದ್ದುಗೆಯ ಕಲ್ಲಿಗೆ ಹನುಮಪ್ಪ ಒಡಮೂಡಿದ್ದಾನೆ. “ಶ್ರೀರಾಮದಾಸರ ಕಟ್ಟೆ” ಎಂದೇ ಪ್ರಖ್ಯಾತಗೊಂಡಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಡಿಸೆಂಬರ್ 25 ರಂದು ದಾಸರ ಆರಾಧನೆಯನ್ನು ಗೋನವಾರದಲ್ಲಿ ದಿ. ವೇ. ಮೂ. ಜ್ಯೋತಿರ್ವಿದ್ವಾನ್ ಪಂಡಿತ್ ದೈವಜ್ಞ ಕುಲಭೂಷಣ ಶ್ರೀ ಗೋವಿಂದಾಚಾರ್ಯ ಹಾಗೂ ಕು. ಸೌ. ರಂಗುಬಾಯಿ ಇವರ ಮಕ್ಕಳು ಮೊಮ್ಮಕ್ಕಳು, ಕುಲಕರ್ಣಿ ಅವರ ಮನೆಯಲ್ಲಿ ಮತ್ತು ಕೃಷ್ಣನದಿ ತೀರದಲ್ಲಿರುವ ಲಿಂಗದಹಳ್ಳಿಯಲ್ಲಿ ಭರ್ಜರಿಯಾಗಿ ಆಚರಿಸುತ್ತಾರೆ.