ಮಂಗಳೂರು: ನಗರದ ಮಸೀದಿಯೊಂದರಲ್ಲಿ ಗುಂಡೇಟಿನಿಂದ ಧಾರ್ಮಿಕ ಮುಖಂಡರೊಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ 35 ವರ್ಷದ ರೌಡಿ ಶೀಟರ್ ಬದ್ರುದ್ದೀನ್ ಅಲಿಯಾಸ್ ಬದ್ದು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ರೌಡಿ ಶೀಟರ್ನನ್ನು ಬಂಧಿಸಿದ್ದಾರೆ.
ವಾಮಂಜೂರಿನ ಸೆಕೆಂಡ್ ಬಜಾರ್ ಪ್ರದೇಶದ ಅಂಗಡಿಯೊಂದರಲ್ಲಿ ಜನವರಿ 6ರಂದು ಗುಂಡಿನ ದಾಳಿ ನಡೆದಿದ್ದು, ಎಡೂರುಪದವು ಮಸೀದಿಯ ಧಾರ್ಮಿಕ ಮುಖಂಡ ಸಫ್ವಾನ್ ಗಾಯಗೊಂಡಿದ್ದರು. ಸಫ್ವಾನ್ ಅವರು ಬಂದೂಕನ್ನು ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಪೊಲೀಸರ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ತನಿಖೆಯ ವೇಳೆ ಬದ್ರುದ್ದೀನ್ ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ.
ಆದರೆ, ವಿಚಾರಣೆ ವೇಳೆ ಬಂದೂಕು ಭಾಸ್ಕರ್ ಬಜ್ಪೆ ಎಂಬುವವರಿಗೆ ಸೇರಿದ್ದು ಎಂದು ಹೇಳುವ ಮೂಲಕ ತನಿಖೆಯನ್ನು ದಾರಿ ತಪ್ಪಿಸಲು ಯತ್ನಿಸಿದರು. ಸಫ್ವಾನ್ ಅವರ ಹೇಳಿಕೆ ಅಸಮಂಜಸವಾಗಿದ್ದು, ಆರೋಪಿಯನ್ನು ರಕ್ಷಿಸುವ ಪ್ರಯತ್ನದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಹೆಚ್ಚಿನ ವಿಚಾರಣೆ ವೇಳೆ ಬಂದೂಕನ್ನು ಅಕ್ರಮವಾಗಿ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಘಟನೆ ನಡೆಯುವ ಒಂದು ದಿನ ಮೊದಲು ಇಮ್ರಾನ್ ಎಂಬ ವ್ಯಕ್ತಿ ಕೇರಳದ ವ್ಯಕ್ತಿಯೊಬ್ಬನಿಂದ ಬಂದೂಕನ್ನು ಖರೀದಿಸಿ ಬದ್ರುದ್ದೀನ್ಗೆ ಹಸ್ತಾಂತರಿಸಿದ್ದಾನೆ ಎಂದು ಹೇಳಲಾಗಿದೆ.
ಸಫ್ವಾನ್ ಏಕೆ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾನೆ ಎಂಬ ಬಗ್ಗೆ ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣದ ಕುರಿತು ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.