ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಯಾವುದೇ ವಿಷಯದಲ್ಲಿ ಎಲ್ಲಿಯೂ ನಕಾರಾತ್ಮಕ ಚಿಂತನೆ ಇಲ್ಲದ ಸರ್ವರ ಪ್ರೀತಿ ಪಾತ್ರರಾಗಿ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬಣ್ಣಿಸಿದ್ದಾರೆ.ವಿಧಾನಸಭೆಯಲ್ಲಿಂದು ಕೃಷ್ಣ ಅವರ ನಿಧನಕ್ಕೆ ಸಂತಾಪಸೂಚಕ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಪ್ರತಿಯೊಂದು ಸಾವು ಒಂದು ಸಂದೇಶ ಕೊಡುತ್ತದೆ.
ಅನೇಕ ಹುದ್ದೆಗಳನ್ನು ಎಸ್.ಎಂ.ಕೃಷ್ಣ ಅವರು ಅಲಂಕರಿಸಿದ್ದರುಸಹ ಬಹುತೇಕ ವಿಷಯಗಳನ್ನು ಸಕಾರಾತ್ಮಕವಾಗಿಯೇ ಚಿಂತಿಸುವ ಮೂಲಕ ತಾವು ಅಂದುಕೊಂಡಿದ್ದ ಕಾರ್ಯಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲಾ ರಾಜಕೀಯ ಯುವ ಮುಖಂಡರಿಗೆ ಮಾದರಿಯಾದ ಮುತ್ಸದ್ಧಿ ಎಂದರು.
ಬೆಂಗಳೂರಿನ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಶಾಶ್ವತವಾದ ಹೆಸರನ್ನು ಗಳಿಸಿದ್ದಾರೆ ಎಂದು ಕೃಷ್ಣ ಅವರ ಕಾರ್ಯಸಾಧನೆ ಅಥವಾ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಭಾಧ್ಯಕ್ಷರ ಮಾತನ್ನು ಸಮರ್ಥಿಸಿ ಮಾತನಾಡಿ, ಮುತ್ಸದ್ದಿ ರಾಜಕಾರಣಿಯಾಗಿ ಸಾರ್ವಜನಿಕ ಜೀವನದಲ್ಲಿ ಅತೀ ದೀರ್ಘ ಕಾಲ ರಾಜಕೀಯ ಜೀವನ ನಡೆಸಿದರು ಎಂದರು.ವಿದ್ಯಾರ್ಥಿ ದೆಸೆಯಲ್ಲಿ 1968ರಲ್ಲಿ ಟೆಕ್ಸಾಸ್ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ದೇಶದ ನಾಲ್ಕು ಸದನಗಳಲ್ಲಿ ಸದಸ್ಯರಾಗಿದ್ದರು. ಸ್ಪೀಕರ್ ಗೌರ್ನರ್ ಸಹ ಆಗಿದ್ದರು. ಕೇಂದ್ರ ಸಚಿವರೂ ಆಗಿದ್ದರು ಎಂದು ಬಣ್ಣಿಸಿ ಯಾರನ್ನೂ ದ್ವೇಷಿಸದ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ಎಸ್.ಎಂ.ಕೃಷ್ಣ ಆಗಿದ್ದರು ಎಂದು ಹೇಳಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ, ದೇಶದಲ್ಲಿ ಎಸ್.ಎಂ.ಕೃಷ್ಣ ಅವರನ್ನು ಬೆಂಗಳೂರಿನ ಜನ ಮಾತ್ರ ಮರೆಯಲು ಸಾಧ್ಯವಿಲ್ಲ. ಬೆಂಗಳೂರಿನ ಬೆಳವಣಿಗೆಗೆ ಎಸ್.ಎಂ.ಕೃಷ್ಣ ಅವರು ಶ್ರಮಿಸಿದ್ದು ಅಭೂತಪೂರ್ವ. ದೇಶದ ಯಾವುದೇ ಜನರು ವಿದೇಶದವರು, ಯಾರೇ ಬಂದರು ಬೆಂಗಳೂರಿಗೆ ಪ್ರಥಮ ಭೇಟಿ ಕೊಡುವುದು ಸರ್ವೇ ಸಾಮಾನ್ಯ. ಬೆಂಗಳೂರನ್ನು ಬೆಳವಣಿಗೆ ಮಾಡುವಲ್ಲಿ ಕೆಂಪೇಗೌಡರು ಮಾಡಿದ ಕಾರ್ಯದಂತೆಯೇ ಕೃಷ್ಣ ಅವರು ಮಾಡಿದ್ದಾರೆ ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಎಸ್.ಎಂ.ಕೃಷ್ಣ ಮತ್ತು ತಮ್ಮ ನಡುವೆ ಇದ್ದ ಒಡನಾಟವನ್ನು ಸ್ಮರಿಸಿ ಎಸ್.ಕೃಷ್ಣ ದೇಶ ಮತ್ತು ರಾಜ್ಯದಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ಗಳಿಸಿಕೊಂಡು ಉಳಿಸಿಕೊಂಡಿದ್ದರು ಎಂದರು.ಸದನದ ಬಹುತೇಕ ಸದಸ್ಯರು ಕೃಷ್ಣ ಅವರ ಬಗ್ಗೆ ಮಾತನಾಡಿ ಅವರ ಕಾರ್ಯಸಾಧನೆಗಳ ಗುಣಗಾನ ಮಾಡಿದರು.