ಹೈದರಾಬಾದ್: ಹೈದರಾಬಾದ್ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ಜುಬಿಲಿ ಹಿಲ್ಸ್ ನಿವಾಸದ ಮೇಲೆ ಕಲ್ಲುತೂರಾಟ ನಡೆಸಿ ಧ್ವಂಸಗೊಳಿಸಿದ ಆರೋಪ ಹೊತ್ತಿರುವ ಆರು ಆರೋಪಿಗಳಿಗೆ ಜಾಮೀನು ದೊರಕಿದೆ. ಆರೋಪಿಗಳನ್ನು ಸೋಮವಾರ ಬೆಳಿಗ್ಗೆ ಹೈದರಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ಆರೋಪಿಗಳ ಪರ ವಾದ ಮಂಡಿಸಿದ ವಕೀಲ ರಾಮದಾಸ್, ಉಸ್ಮಾನಿಯಾ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ವಿದ್ಯಾರ್ಥಿಗಳು ಮುಂದಾಗಿದ್ದಾರೆ ಎಂದಿದ್ದಾರೆ.
‘ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸ್ ಪಡೆ ಅವರ ಮೇಲೆ ದಾಳಿ ನಡೆಸಿದಾಗ ಅವರು ತಮ್ಮ ಆತ್ಮರಕ್ಷಣೆಗಾಗಿ ಈ ರೀತಿ ವರ್ತಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂದು ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಬಳಿಕ ಆರು ಜನರಿಗೆ ಯಾವುದೇ ಷರತ್ತುಗಳಿಲ್ಲದೆ ಮತ್ತು ದಂಡವಿಲ್ಲದೆ ಜಾಮೀನು ನೀಡಲಾಗಿದೆ’ ಎಂದು ರಾಮದಾಸ್ ಎಎನ್ಐಗೆ ತಿಳಿಸಿದ್ದಾರೆ.
ಹೈದರಾಬಾದ್ನ ಪಶ್ಚಿಮ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಕಾರ, ಭಾನುವಾರ ಸಂಜೆ ಕೆಲವು ವ್ಯಕ್ತಿಗಳು ಫಲಕಗಳನ್ನು ಹಿಡಿದುಕೊಂಡು ಇದ್ದಕ್ಕಿದ್ದಂತೆ ಜುಬಿಲಿ ಹಿಲ್ಸ್ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಅವರಲ್ಲಿ ಒಬ್ಬಾತ ಕಾಂಪೌಂಡ್ ಏರಿ ಟೊಮೆಟೊಗಳನ್ನು ಎಸೆಯಲು ಪ್ರಾರಂಭಿಸಿದನು. ಆರು ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಭಾಗವೆಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ರೇವತಿ ಸಾವಿಗೆ ಮತ್ತು ಆತನ ಮಗ ಸಾಯಿ ತೇಜಾ ಅಸ್ವಸ್ಥನಾಗಲು ಅಲ್ಲು ಅರ್ಜುನ್ ನೇರ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಮನೆ ಮೇಲೆ ಕಲ್ಲು, ಟೊಮೊಟೊ ಎಸೆದು, ಮನೆ ಮುಂದಿದ್ದ ಹೂವಿನ ಕುಂಡಗಳನ್ನು ಒಡೆದುಹಾಕಿದ್ದರು. ಈ ಆರೋಪದ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಆರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು.