ಕನ್ನಡ ಚಿತ್ರನಟ ಡಾಲಿ ಧನಂಜಯ ಹಾಗೂ ವೈದ್ಯೆ ಡಾ.ಧನ್ಯತಾ ಅವರ ನಿಶ್ಚಿತಾರ್ಥವು ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಭಾನುವಾರ ನಡೆಯಿತು.ಸರಳ ಸಮಾರಂಭದಲ್ಲಿ ಕುಟುಂಬದ ಸದಸ್ಯರಷ್ಟೇ ಪಾಲ್ಗೊಂಡಿದ್ದರು. 2025 ಫೆ.16 ರಂದು ಮೈಸೂರಿನಲ್ಲಿ ವಿವಾಹ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾಲಿ ಧನಂಜಯ್ ಅವರು ತಮ್ಮ ಭಾವಿ ಪತ್ನಿ ಡಾ.ಧನ್ಯತಾ ಅವರ ಬೆರಳಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನ್ಯತಾ ಅವರೂ ಸಹ ಡಾಲಿ ಬೆರಳಿಗೆ ಉಂಗುರ ತೊಡಿಸಿದ್ದಾರೆ.ಲಗ್ನ ಬರೆಸುವ ಶಾಸ್ತ್ರವೂ ನಡೆದಿದ್ದು, ಗುರು-ಹಿರಿಯರು, ಬಂಧುಗಳ ಎದುರು ಮದುವೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ.
ಡಾಲಿ ಧನಂಜಯ್ ಪತ್ನಿ ಧನ್ಯತಾ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿ, ಕುಟುಂಬದವರೂ ಒಪ್ಪಿ ಮದುವೆ ಆಗುತ್ತಿದ್ದಾರೆ. ಧನ್ಯತಾ ಸಹ ಕಷ್ಟಪಟ್ಟು ಸಾಧನೆ ಮಾಡಿದ ಯುವತಿ. ಡಾಲಿ ಧನಂಜಯ್ ಸದ್ಯ ನಟ, ನಿರ್ಮಾಪಕ, ಗೀತ ಬರಹಗಾರರಾಗಿ ಗಮನ ಸೆಳೆಯುತ್ತಿದ್ದಾರೆ. ಕನ್ನಡ, ತೆಲುಗು ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.