ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಕೊನೆಗೂ ಆಸ್ಪತ್ರೆಯಿಂದ ಬುಧವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ. ಕೋರ್ಟ್ ನಿಂದ ಮಧ್ಯಂತರ ಜಾಮೀನು ಸಿಕ್ಕಿ ಬೆನ್ನುನೋವು ಎಂದು ಆಸ್ಪತ್ರೆ ಸೇರಿದ್ದ ದರ್ಶನ್ ರ 47 ದಿನಗಳ ಆಸ್ಪತ್ರೆ ವಾಸ ಈ ಮೂಲಕ ಅಂತ್ಯವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅವರು ಬೆನ್ನುನೋವು ಹಿನ್ನೆಲೆ ನವೆಂಬರ್ 1 ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ನಟ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದುಕೊಂಡರು. ಇದೀಗ ಕೋರ್ಟ್ ನಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ನಟನನ್ನು ಕರೆದೊಯ್ಯಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಮತ್ತು ಕುಟುಂಬಸ್ಥರು, ಆಪ್ತರು ಬಂದಿದ್ದರು. ಪುತ್ರ ವಿನೀಶ್ ಕೈಹಿಡಿದುಕೊಂಡು ನಟ ಆಸ್ಪತ್ರೆಯಿಂದ ಹೊರ ಬಂದರು. ಬಳಿಕ ಕಾರ್ ಹತ್ತಿ ಆಸ್ಪತ್ರೆಯಿಂದ ಹೊರಟರು. ಅಲ್ಲಿಂದ ನೇರವಾಗಿ ಹೊಸಕೆರೆಹಳ್ಳಿಯಲ್ಲಿ ವಿಜಯಲಕ್ಷ್ಮಿ ವಾಸವಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟಿಗೆ ತೆರಳಿದ್ದಾರೆ.
ತೀವ್ರ ಬೆನ್ನುನೋವು ಎಂದು ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದರು.ಡಿಸೆಂಬರ್ 11 ಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಕೋರ್ಟ್ಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಮಾಹಿತಿ ನೀಡಿದ್ದರು. ಆ ಬಳಿಕ ಆಪರೇಷನ್ ಬದಲು ಫಿಜಿಯೋ ಥೆರಪಿ ನೀಡಲು ವೈದ್ಯರು ಸೂಚಿಸಿದ್ದರು. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸಿಲ್ಲ ಎನ್ನಲಾಗಿದೆ.