ನವದೆಹಲಿ: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ಲೆಜೆಂಡರಿ ನಟ ಧರ್ಮೇಂದ್ರ ಹಾಗೂ ಮತ್ತಿಬ್ಬರಿಗೆ ದೆಹಲಿ ನ್ಯಾಯಾಲಯವೊಂದು ಸಮನ್ಸ್ ನೀಡಿದೆ.
ಗರಂ ಧರಮ್ ಡಾಬಾ ಫ್ರ್ಯಾಂಚೈಸ್ ಗೆ ಸಂಬಂಧಿಸಿದಂತೆ ಉದ್ಯಮಿ ಸುಶೀಲ್ ಕುಮಾರ್ ದಾಖಲಿಸಿದ್ದ ದೂರಿನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಯಶ್ ದೀಪ್ ಚಹಲ್ ಅವರು, 89 ವರ್ಷದ ಧರ್ಮೇಂದ್ರ ಅವರಿಗೆ ಸಮನ್ಸ್ ನೀಡಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಆರೋಪಿಗಳು ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ವಂಚನೆಯ ಅಪರಾಧದ ಅಂಶಗಳನ್ನು ಸರಿಯಾಗಿ ಬಹಿರಂಗಪಡಿಸಲಾಗಿದೆ ಎಂದು ನ್ಯಾಯಾಧೀಶರು ಡಿಸೆಂಬರ್ 5 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಇದು ವಂಚನೆ, ಕ್ರಿಮಿನಲ್ ಸಂಚಿನ ಪ್ರಕರಣವೆಂದು ನ್ಯಾಯಾಧೀಶರು ಹೇಳಿದ್ದು, ಫೆಬ್ರವರಿ 20 ರಂದು ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ ಎಂದು ವಕೀಲ ಡಿ.ಡಿ. ಪಾಂಡ್ಯ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ NH-24/NH-9 ನಲ್ಲಿ ಗರಂ ಧರಮ್ ಡಾಬಾ ಪ್ರಾಂಚೈಸಿ ತೆರೆಯುವ ಪ್ರಸ್ತಾಪದೊಂದಿಗೆ ಏಪ್ರಿಲ್ 2018ರಲ್ಲಿ ಧರಂ ಸಿಂಗ್ ಡಿಯೋಲ್ (ಧರ್ಮೇಂದ್ರ) ಪರವಾಗಿ ಸಹ ಆರೋಪಿಗಳು ಸಂಪರ್ಕಿಸಿದ್ದರು. ಸೆಪ್ಟೆಂಬರ್ 2018ರಲ್ಲಿ ರೂ. 17.70 ಲಕ್ಷದ ಚೆಕ್ ನ್ನು ಹಸ್ತಾಂತರಿಸಿರುವುದಾಗಿ ಅವರು ಹೇಳಿದ್ದರು. ಆದರೆ, ನಂತರ ಆರೋಪಿಗಳು ಅವರೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.