ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಚಿಸಿರುವ ಸಮಿತಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ನಿನ್ನೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಡೆಸಿದ್ದ ಧರಣಿಯನ್ನು ಇಂದೂ ಸಹ ಮುಂದುವರೆಸಿವೆ.ಇಂದು ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳಾದ ಜೆಡಿಎಸ್, ಬಿಜೆಪಿ ಶಾಸಕರು ತಮ್ಮ ಧರಣಿಯನ್ನು ಮುಂದುವರೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಪರಿಸ್ಥಿತಿ ಗಮನಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಮಧ್ಯಾಹ್ನ 1.45ಕ್ಕೆ ಮುಂದೂಡಿದ ಪರಿಣಾಮ ಪ್ರತಿಪಕ್ಷಗಳ ಧೋರಣೆಗೆ ಕಲಾಪ ಬಲಿಯಾಯಿತು.ಕಲಾಪವನ್ನು ಮುಂದೂಡಿದ ನಂತರ ಪ್ರತಿಪಕ್ಷಗಳಾದ ಜೆಡಿಎಸ್-ಬಿಜೆಪಿ ಶಾಸಕರು ಸರ್ಕಾರದ ಧೋರಣೆಯನ್ನು ಖಂಡಿಸಿ ದೂರು ನೀಡಲು ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿದರು.ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಬಿಜೆಪಿ ಜೆಡಿಎಸ್ ಶಾಸಕರು ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರಲ್ಲದೆ ಇದೊಂದು ಲೂಟಿ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಧರಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ನ ಸಿಬಿ.ಸುರೇಶ್ಬಾಬು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಸಿ.ಟಿ.ರವಿ, ಸುನೀಲ್ ಕುಮಾರ್, ಸಿ.ಸಿ.ಪಾಟೀಲ್, ಕೆ.ಗೋಪಾಲಯ್ಯ ಸೇರಿದಂತೆ ಬಿಜೆಪಿ-ಜೆಡಿಎಸ್ ಶಾಸಕರು ಪಾಲ್ಗೊಂಡರು.ಈ ಸಂದರ್ಭದಲ್ಲಿ ಬಹುತೇಕರು ಮಾತನಾಡಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ಅನೇಕರಿಗೆ ಸಂಬಳ ಕೊಡಲು ಹಣವಿಲ್ಲ ಈ ಸರ್ಕಾರ ಪಾಪರ್ ಆಗಿದೆ. ಆದರೂ ಸರ್ಕಾರದ ಹಣವನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಂಬಳದ ಮೂಲಕ ನೀಡಿ ಮೋಜು-ಮಸ್ತಿ ಮಾಡಲು ಮುಂದಾಗಿದೆ.ಕಾಂಗ್ರೆಸ್ ಕಾರ್ಯಕರ್ತರೇನು ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರಾ ಎಂದು ಹರಿಹಾಯ್ದರು.
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ಕಾಂಗ್ರೆಸ್ಸನ್ನೇ ಮುಚ್ಚಿಬಿಡಿ. ಜನರಿಗೆ ನೆಮ್ಮದಿಯಾಗುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.