ಬೆಂಗಳೂರು/ಬಳ್ಳಾರಿ: ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಬಿಎಂಸಿಆರ್ಸಿ) ಬಾಣಂತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ.
ಡಿಸೆಂಬರ್ 5ರ ರಾತ್ರಿ ನಡೆದ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭರವಸೆ ನೀಡಿದರು. ಈ ಮಧ್ಯೆ ಬಾಣಂತಿಯರ ಸಾವಿನ ಕುರಿತಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು, ಜಿಲ್ಲಾಸ್ಪತ್ರೆಯಲ್ಲಿ ಏನೆಲ್ಲಾ ನ್ಯೂನತೆಗಳಾಗಿವೆ ಅಂತ ನಾವು ತನಿಖೆ ಮಾಡುತ್ತಿದ್ದೇವೆ. ನಮಗೆ ಗೊತ್ತಾಗದೇ ಇನ್ನೆಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ ಗೊತ್ತಿಲ್ಲ. ಔಷಧಿ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಒಂದು ವೇಳೆ ನನ್ನ ತಪ್ಪಿದ್ದರೆ ರಾಜಿನಾಮೆ ಕೊಡಲು ಸಿದ್ದ ಎಂದು ಹೇಳಿದ್ದಾರೆ.
23 ವರ್ಷದ ಕೋಲ್ಮಿ ಸುಮೈಯಾ ನವೆಂಬರ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅವರಿಗೆ ಮೂತ್ರಪಿಂಡ ವೈಫಲ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಿಸೇರಿಯನ್ ಶಸ್ತ್ರಚಿಕಿತ್ಸೆ ನಂತರ ಆಕೆಯ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಆಕೆಯನ್ನು ಡಯಾಲಿಸಿಸ್ಗೆ ಒಳಪಡಿಸಬೇಕಾಗಿತ್ತು. ಕಳೆದ ರಾತ್ರಿ ಆಕೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಂಬತ್ತೂ ಗರ್ಭಿಣಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಅವರ ಪೈಕಿ ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಈ ಪ್ರಕರಣಗಳಲ್ಲಿ ಎಲ್ಲಾ ನವಜಾತ ಶಿಶುಗಳು ಆರೋಗ್ಯವಾಗಿವೆ.
ಆರೋಗ್ಯ ಇಲಾಖೆ ಪ್ರಕಾರ, ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ 9 ರಿಂದ 11ರ ನಡುವೆ ನಾಲ್ಕು ತಾಯಂದಿರ ಸಾವು ವರದಿಯಾಗಿದೆ. ಪಶ್ಚಿಮ ಬಂಗಾಳ ಮೂಲದ ಫಾರ್ಮಾ ಕಂಪನಿಯು ಸರಬರಾಜು ಮಾಡಿದ ರಿಂಗರ್ ಲ್ಯಾಕ್ಟೇಟ್ (ಆರ್ಎಲ್) ಬ್ಯಾಚ್ಗಳನ್ನು ಬಳಸಲಾಗಿದೆ ಎಂದು ಗಮನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಹಲವೆಡೆ ತಾಯಂದಿರ ಸಾವುಗಳು ಸಂಭವಿಸುತ್ತವೆ. ಪರಿಸ್ಥಿತಿಯ ಅರಿವಿದೆ ಎಂದು ಒಪ್ಪಿಕೊಂದ ಸಿದ್ದರಾಮಯ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾವ್, ಪರಿಸ್ಥಿತಿ ಸರಿ ಹೋಗದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧ, ಇದು ಪ್ರತಿಷ್ಠೆ ಅಥವಾ ಅಧಿಕಾರಕ್ಕೆ ಸಂಬಂಧಿಸಿದ್ದಲ್ಲ, ಇದು ಜನರ ಜೀವಕ್ಕೆ ಸಂಬಂಧಿಸಿದ್ದು, ಬಳ್ಳಾರಿಯಲ್ಲಿ ನಡೆದ ತಾಯಂದಿರ ಮರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಸುಧಾರಣೆಗಳನ್ನು ತರಲು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಪ್ರಕರಣದ ತನಿಖೆಗೆ ತಮ್ಮ ಅಭ್ಯಂತರವಿಲ್ಲ ಎಂದು ರಾವ್ ಹೇಳಿದರು. ತನಿಖೆ ನಡೆಯಬೇಕು, ಯಾರೇ ಹೊಣೆಗಾರರಾದರೂ ಕ್ರಮ ಎದುರಿಸಬೇಕಾಗುತ್ತದೆ. ವ್ಯವಸ್ಥೆಯನ್ನು ಸುಧಾರಿಸಲು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡಲು ನಾವು ಬದ್ಧರಾಗಿದ್ದೇವೆ. ನಾನು ಇದಕ್ಕೆ ವಿರೋಧ ಪಕ್ಷದ ಬೆಂಬಲವನ್ನು ಸಹ ಕೋರುತ್ತೇನೆ ಎಂದರು.