ರಾಮನಗರ: ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲೂ ಗೊಂಬೆ ಕೂರಿಸುವ ಪದ್ಧತಿ ಇಂದಿಗೂ ಮುಂದುವರಿದಿದ್ದು, ಜಾನಪದ ಲೋಕದಲ್ಲೂ ಕಳೆದ 27 ವರ್ಷಗಳಿಂದಲೂ ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ, ನವರಾತ್ರಿಯ ಒಂಬತ್ತು ದಿನಗಳಲ್ಲದೇ, ಇಲ್ಲಿ ಒಂದು ತಿಂಗಳು ಈ ಬೊಂಬೆ ಪ್ರದರ್ಶನ ಇರುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ . ಹಿ.ಚಿ. ಬೋರಲಿಂಗಯ್ಯ ಅವರು ಹೇಳಿದರು.
ಜಾನಪದ ಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಪ್ರದರ್ಶನದಲ್ಲಿ ವಿಶ್ವದ ವಿವಿಧ ದೇಶಗಳ ವೇಷ-ಭೂಷಣದ ಆಕೃತಿಗಳು ಕಾಣಸಿಗಲಿದೆ. ಇಲ್ಲಿ ಪಟ್ಟದ ಗೊಂಬೆಗಳು, ಶಿವ, ಪಾರ್ವತಿ, ವಿಷ್ಣು, ಲಕ್ಷ್ಮೀ, ಸರಸ್ವತಿ, ಗೋವರ್ಧನ ಗಿರಿ ಎತ್ತಿದ ಕೃಷ್ಣ, ವಿಷ್ಣು ಪರಿವಾರ, ರಾವಣನ ದರ್ಬಾರ್, ದೇವಸ್ಥಾನದ ಮುಂದೆ ಕುಣಿತ ಮೆರೆತಗಳ ಉತ್ಸವ, ಮೈಸೂರು ಅರಮನೆಗಳು ಬೊಂಬೆಗಳು ಹಾಗೂ ವಿಶೇಷ ಬೊಂಬೆಗಳು ಅನಾವರಣಗೊಳಿಸಲಾಗಿದೆ ಎಂದರು.
ಜಾನಪದ ಲೋಕದಲ್ಲಿ ಈಗಾಗಲೇ ಗಿರಿಜನ ಕುಟೀರದ ಒಟ್ಟು ಐದು ಬುಡಕಟ್ಟು ಕುಟೀರಗಳು ನಿರ್ಮಾಣವಾಗಿದ್ದು, ಇದು ಈಗ ವೀಕ್ಷಕರ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ.ಪ್ರಸ್ತುತ ಎರಡನೇ ಹಂತದ ಕೆಲಸ ಪ್ರಗತಿಯಲ್ಲಿದ್ದು ಸೋಲಿಗರು, ಸಿದ್ದಿಯರು, ಕಾಡುಗೊಲ್ಲರು, ಕುಣಿಬಿ ಮತ್ತು ರಾಮನಗರ ಜಿಲ್ಲೆಯ ಇರುಳಿಗರು ಈ ಐದು ಸಮುದಾಯಗಳ ಜೀವನ ಕ್ರಮ ಮತ್ತು ಅವರ ಕಲೆಗಳನ್ನು ಪ್ರತಿನಿಧಿಸುವ ಕಲಾ ಪ್ರತಿಮೆಗಳನ್ನು ಆಯಾ ಕುಟೀರಗಳ ಬಳಿ ಇಡಲಾಗುತ್ತಿದೆ. ಅಲ್ಲದೇ, ಗೊಂಡರ ಧಾನ್ಯ ಸಂಗ್ರಹ ಕಣಜ, ಜೇನು ಕುರುಬರ ಮಾವುತ ಮತ್ತು ಆನೆ, ಬುಡಕಟ್ಟು ದೈವಾರಾಧನೆ ಕೇಂದ್ರ, ಜೊತೆಗೆ ಬುಡಕಟ್ಟುಗಳ ಕಲೆಗಳನ್ನು ಪ್ರದರ್ಶಿಸಲು ಸುಂದರ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಿಡಿಲು ಬಡಿದು ಹಾಳಾದ ಮಲೆಕುಡಿಯರ ಕುಟೀರದ ಪುನರ್ ನಿರ್ಮಾಣ ಕೆಲಸವು ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳನ್ನು ಮುಂದಿನ ಫೆಬ್ರವರಿಯಲ್ಲಿ ನಡೆಯುವ ಲೋಕೋತ್ಸವದ ವೇಳೆಗೆ ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದರು.
ಜಾನಪದ ಲೋಕದಲ್ಲಿ 1999 ರಿಂದಲೂ “ಜಾನಪದ ಮಹಾವಿದ್ಯಾಲಯ” ದ ಅಡಿಯಲ್ಲಿ ಜನಪದ ಕಲೆ, ಸಾಹಿತ್ಯ ಸಂಸ್ಕøತಿ ಹಾಗೂ ಬದುಕನ್ನು ಕುರಿತ ಶಿಕ್ಷಣವನ್ನು ನೀಡುತ್ತಾ ಬರಲಾಗುತ್ತಿದೆ.
ಜಾನಪದ ಡಿ ಪ್ಲೋ ಮಾ ತರಗತಿಗಳು ಪ್ರಾರಂಭವಾಗಿ ಈ ಸಾಲಿಗೆ 25 ವರ್ಷಗಳು ತುಂಬುತ್ತಿದೆ ಎಂದವರು ಹೇಳಿದರು.ಇದು ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಆ ನಿಟ್ಟಿನಲ್ಲಿ ಪ್ರತಿ ಭಾನುವಾರ ಅರ್ಧದಿನ ಪಾಠ, ಉಳಿದ ಅರ್ಧದಿನ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿ ಪ್ಲೋಮಾ ಕೋರ್ಸ್ ನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಾಡೋಜ ಎಚ್. ಎಲ್. ನಾಗೇಗೌಡ ಸಂಶೋಧನಾ ಕೇಂದ್ರವು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ 2024-2025ನೇ ಸಾಲಿಗೆ ಪಿಎಚ್.ಡಿ ಸಂಶೋಧನೆಯನ್ನು ಪ್ರಾರಂಭಿಸಿದ್ದು, ಜಾನಪದ ವಿಷಯದಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಯುಜಿಸಿ ನಿಯಮಾನುಸಾರ ಸಂಶೋಧನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಯುನೆಸ್ಕೋ 2003ರ ಅಮೂರ್ತ ಸಾಂಸ್ಕøತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಯುನೆಸ್ಕೋದಿಂದ ನೀಡಲಾಗುವ ಮಾನ್ಯತೆ ಪಡೆದಿರುವುದನ್ನು ತಿಳಿಸಲು ಸಂತೋಷ ಪಡುತ್ತೇವೆ. ಈ ಮಾನ್ಯತೆಯನ್ನು 2024ರ ಜೂನ್ ತಿಂಗಳಿನಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಘೋಷಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಗೋಷ್ಠಿಯಲ್ಲಿದ್ದರು.