ಬೆಂಗಳೂರು: ನಾಗರೀಕ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಚಾರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಸರ್ಕಾರ ಮಂಗಳವಾರ ಸ್ಪಷ್ಟನೆ ನೀಡಿದೆ.
ರಾಜ್ಯದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ.4 ರಷ್ಟು ಮೀಸಲಾತಿಯನ್ನು ನೀಡಲು ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.
ಮೀಸಲಾತಿ ನೀಡುವಂತೆ ಮುಸ್ಲಿಂ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (2ನೇ ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿತ್ತು. ಈ ಕುರಿತಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ವಿಚಾರ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.
ಇದೀಗ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ಮೀಸಲಾತಿ ಬೇಡಿಕೆ ಇರುವುದು ನಿಜ, ಆದರೆ ಇದಕ್ಕೆ ಒಪ್ಪಿಗೆ ನೀಡಲಾಗಿದೆ ಎಂಬ ವರದಿ ಸುಳ್ಳು ಎಂದು ಹೇಳಿದೆ.
ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಬಿಜೆಪಿ ನಾಯಕ ಸಿಟಿ ರವಿ ಅವರು ಮಾತನಾಡಿ, ರಾಜ್ಯದಲ್ಲಿ ಹಿಂದುಗಳ, ರೈತರ ಭೂಮಿಯನ್ನು ವಕ್ಫ್ ಗೆ ಕೊಟ್ಟು ತಾನು ಹಿಂದೂ ಹಾಗು ರೈತ ವಿರೋಧಿ ಎಂದು ಸಾಬೀತುಪಡಿಸಿದ ರಾಜ್ಯ ಕಾಂಗ್ರೇಸ್ ಸರ್ಕಾರ ಈಗ ತನ್ನ ತುಷ್ಟಿಕರಣದ ರಾಜಕೀಯ ಪ್ರದರ್ಶನದ ಇನ್ನೊಂದು ಮಜಲನ್ನು ತಲುಪಿದೆ. ಬಹುಸಂಖ್ಯಾತ ವಿರೋಧಿ ಕಾಂಗ್ರೇಸ್ ನೇತೃತ್ವದ ಕರ್ನಾಟಕ ಸರ್ಕಾರ, ಈಗ ಸರ್ಕಾರಿ ಟೆಂಡರ್ ಗಳಲ್ಲಿ ಕೋಟಾ ನಿಗದಿ ಮಾಡಿ, ಮತ್ತೆ ಮುಸಲೀಮರನ್ನು ಓಲೈಸಲು ಹೊರಟಿದೆ. ರಾಜಕೀಯದಲ್ಲಿ ಒಂದು ಮತದ ಓಲೈಕೆ ಮಾಡುವ ಕಾಂಗ್ರೆಸ್ ತನ್ನ ತುಷ್ಠಿಕರಣದ ನಿರ್ಧಾರಗಳನ್ನು ಈ ಕೂಡಲೇ ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದಿನ ಎಲ್ಲಾ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಎಸ್ಸಿ ಎಸ್ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಶೇ.24 ಗುತ್ತಿಗೆ ಮೀಸಲಾತಿ ನೀಡಲಾಗಿದೆ. ಒಬಿಸಿ ಸಮುದಾಯಕ್ಕೆ ಶೇ.4, 2ಎ ಅಡಿ ಶೇ.15 ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ಒಟ್ಟು ಸರ್ಕಾರದ ಕಾಮಗಾರಿಗಳಲ್ಲಿ ಶೇ.43ರಷ್ಟು ಮೀಸಲಾತಿ ನೀಡಲಾಗಿದೆ. ಇದೀಗ ಮುಸ್ಲಿಂ ಸಮುದಾಯಕ್ಕೂ ಸರ್ಕಾರದ ಕಾಮಗಾರಿಗಳಲ್ಲಿ ಶೇ. 4 ರಷ್ಟು ಮೀಸಲಾತಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯಯವರಿಗೆ ಮುಸ್ಲಿಂ ಸಮುದಾಯ ಸಚಿವರು, ಶಾಸಕರ ನಿಯೋಗದಿಂದ ಸಿಎಂಗೆ ಮನವಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಸಚಿವರಾದ ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ತನ್ವೀರ್ ಸೇಠ, ಅಬ್ದುಲ್ ಜಬ್ಬಾರ್, ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ, ಆಸೀಪ್ ಸೇಠ, ಖನೀಜಾ ಫಾತಿಮಾ, ಇಕ್ಬಾಲ್ ಹುಸೇನ್, ಬಲ್ಕೀಶ್ ಬಾನು ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ವಿಚಾರ ಇದೀಗ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಸ್ಪಷ್ಟನೆ ನೀಡಿದೆ.