ರಾಮನಗರ: ನಾನು ಕೂಡ ಕುಮಾರಣ್ಣ ರೀತಿ ನಾನು ಜನರೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದೇನೆ. ನಾನು ಚುನಾವಣೆಯಲ್ಲಿ ಸೋತಿದ್ದೀನಿ ಅಷ್ಟೇ, ಸತ್ತಿಲ್ಲ ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ಈ ಸೋಲಿನಿಂದ ನಾನು ಎದೆಗುಂದುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನಾವು ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಬೇಕು. ನನಗೆ ಕೇವಲ 36 ವರ್ಷ ನನಗಿದು ಚಿಕ್ಕ ವಯಸ್ಸು, ದಯವಿಟ್ಟು ನನ್ನನ್ನು ಬಳಸಿಕೊಳ್ಳಿ, ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ, ಎಂದು ತಿಳಿಸಿದರು. ನಮ್ಮ ಪಕ್ಷದ ಆಧಾರ ಸ್ತಂಭಗಳೇ ನಿಷ್ಠಾವಂತ ಕಾರ್ಯಕರ್ತರುಗಳು, ರಾಮನಗರ ಜಿಲ್ಲೆ ನಮಗೆ ರಾಜಕೀಯ ಜೀವನ ನೀಡಿದೆ. ನನ್ನ ಜೀವನವೇ ಹೋರಾಟ, ನಾನು ಸಮುದ್ರದ ಅಲೆಗಳ ವಿರುದ್ಧ ಈಜುವ ಅಭ್ಯಾಸವನ್ನು ಹೊಂದಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
2019ರಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವವರ ಬಗ್ಗೆ ನಾನು ಎಂದಿಗೂ ಹಗುರವಾಗಿ ಮಾತನಾಡಿಲ್ಲ. ನಾನು ಯುವಕನಾಗಿದ್ದೇನೆ, ಯುವ ಸಮುದಾಯದ ಪೀಳಿಗೆಗೆ ನನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ನನ್ನ ಆಶಯ ಎಂದರು. ರಾಮನಗರ ಜಿಲ್ಲೆಯು ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ, ಮೂರು ಬಾರಿ ಕುಮಾರಣ್ಣ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದೆ. ಚುನಾವಣೆಯಲ್ಲಿ ಏಳು ಬೀಳು ಸರ್ವೆ ಸಾಮಾನ್ಯ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಭೆಗೂ ಮುನ್ನ ತಂಬಾಕು ಬೆಳೆಯುವ ರೈತರ ಜತೆ ಸಭೆ ನಡೆಸಿದರು. “ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ತಂಬಾಕು ಬೆಳೆದ ರೈತರು ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸೂಕ್ತ ಬೆಂಬಲ ಕೊಡಿಸಿ” ಎಂದು ಕೇಂದ್ರ ಸಚಿವರು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.