ಚನ್ನಪಟ್ಟಣ: ನಾನು ಕಳೆದ ಎರಡು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ. ಆದರೆ, ನನ್ನ ವಿರುದ್ಧ ಗೆಲುವು ಸಾಧಿಸಿದ ಕುಮಾರರಸ್ವಾಮಿ ಏನು ಕೆಲಸ ಮಾಡಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.
ತಾಲ್ಲೂಕಿನ ಬೇವೂರು ಜಿಲ್ಲಾ ಪಂಚಾಯಿತಿಯ ಕೋಟೆ ಹೊಲ ಗ್ರಾಮದಿಂದ ಪ್ರಚಾರ ಆರಂಭಿಸಿದ ಅವರು ಮಾಕಳಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಅವರು ನಾನು ತಂದಿದ್ದ ಅನುದಾನವನ್ನೇ ಸರಿಯಾಗಿ ಬಳಸಿಕೊಳ್ಳಲಿಲ್ಲ. ಈಗ ನಾನು ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಬಾರಿ ಅವಕಾಶ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂದರು.
ನಾನು ಮತ್ತೆ ಗೆದ್ದು ಕೆರೆಗಳನ್ನ ತುಂಬಿಸುವ ಕೆಲಸ ಮಾಡುತ್ತೇನೆ. ಆ ಎಲ್ಲರೂ ಆಶೀರ್ವಾದ ಮಾಡಿ ಗೆಲ್ಲಿಸಿಕೊಡಿ. ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಈಗ ಅವರ ಮಗನನ್ನ ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರು ಎರಡು ಬಾರಿ ಗೆದ್ದು ಏನು ಕೆಲಸ ಮಾಡಿದ್ದಾರೆ ಯೋಚನೆ ಮಾಡಿ ಎಂದರು.
ಜೆಡಿಎಸ್ ಅಂತ ಜನ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ಕೊಡಬೇಡಿ, ದಯಮಾಡಿ ಈ ಬಾರಿ ಒಂದು ಅವಕಾಶ ಕೊಟ್ಟು ಗೆಲ್ಲಿಸಿಕೊಡಿ ಎಂದು ಯೋಗೇಶ್ವರ್ ಮನವಿ ಮಾಡಿದರು.
ಎರಡು ಬಾರಿ ಸೋತಿದ್ದೇನೆ, ಜನ ಈ ಬಾರಿ ಆಶೀರ್ವಾದ ಮಾಡ್ತಾರೆ ಎನ್ನುವ ವಿಶ್ವಾಸ ಇದೆ. ನನ್ನ ಕೆಲಸಗಳು ಈ ಬಾರಿ ಗೆಲುವಿಗೆ ಅವಕಾಶ ಮಾಡುತ್ತವೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಜನ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರೂ ಬೇಸರ ಬಿಟ್ಟು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ನಾನು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿ ಎಲ್ಲರೂ ಅಸಮಾಧಾನಿತರನ್ನ ಭೇಟಿಯಾಗಿ ಮಾತನಾಡಿದ್ದೇವೆ. ಅಸಮಾಧಾನಿತರನ್ನ ಮನವೊಲಿಸುವ ಕೆಲಸ ಯಶಸ್ವಿ ಆಗುತ್ತಿದೆ ಎಂದರು.
ನಾನು ಪಕ್ಷಾಂತರಿ ಅನ್ನೋದು ಜಗಜ್ಜಾಹಿರ ಅದಕ್ಕೆ ನನಗೆ ಮುಜುಗರ ಇಲ್ಲ: ಅಭಿವೃದ್ಧಿಗಾಗಿ ನಾನು ಪಕ್ಷಾಂತರ ಮಾಡ್ತಿದ್ದೇನೆ. ಜನ ನನ್ನನ್ನ ಪಕ್ಷಕ್ಕಿಂತ ವೈಯಕ್ತಿಕವಾಗಿ ಗೆಲ್ಲಿಸಿದ್ದೇ ಹೆಚ್ಚು. ಹಾಗಾಗಿ ಅವರು ಏನು ಹೇಳಿದರೂ ನಾನು ಬೇಸರ ಮಾಡಿಕೊಳ್ಳಲ್ಲ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿ.ಪಿ.ಯೋಗೇಶ್ವರ್ ಅವರನ್ನು ನೀವು ಎರಡು ಬಾರಿ ಸೋಲಿಸಿದ್ದೀರಾ. ಈ ಬಾರಿ ಅವರು ಕಾಂಗ್ರೆಸ್ನಿAದ ಸ್ಪರ್ಧಿಸಿದ್ದಾರೆ. ಈ ಬಾರಿ ನೀವು ಅವರಿಗೆ ವಿಷ ಹಾಕಲ್ಲ ಹಾಲು ಹಾಕುತ್ತೀರಾ ಎಂದು ನಿಮ್ಮ ಬಳಿ ಬಂದಿದ್ದಾರೆ. ಹಾಲು ಜೇನು ಎರಡು ಸೇರಿಸಿ ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಸ್ತದ ಗುರುತಿನಲ್ಲಿ ಸಿ.ಪಿ ಯೋಗೇಶ್ವರ್ ನಿಂತಿದ್ದಾರೆ. ನಿಮ್ಮನ್ನ ನಂಬಿ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಗೆಲ್ಲಿಸುವುದು ನಿಮ್ಮ ಜವಬ್ದಾರಿ ಎಂದರು.
ನೀವು ವಿಷ ಹಾಕಲ್ಲ ಹಾಲು ಹಾಕ್ತೀರ ಅಂತ ನಿಮ್ಮ ಬಳಿ ಬಂದಿದ್ದಾರೆ: ತಾಲೂಕಿನಲ್ಲಿ ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಂಡು ಯೋಗೇಶ್ವರ್ ಕಾಂಗ್ರೆಸ್ಗೆ ಮರಳಿ ಬಂದಿದ್ದಾರೆ. ತಾಲೂಕಲ್ಲಿ ಇನ್ನಷ್ಟು ಕೆಲಸ ಆಗಬೇಕು ಅಂತ ಕಾಂಗ್ರೆಸ್ ಸೇರಿದ್ದಾರೆ. ನಾವು ಅವರು ಸೇರಿ ಕೆರೆ ತುಂಬಿಸುವ ಕೆಲಸ ಮಾಡಿದ್ವಿ. ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ ಎಂದರು.
ಈ ಹಿಂದೆ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದಿರಿ, ಆದರೆ, ಅವರು ಈಗ ಮಂಡ್ಯಕ್ಕೆ ಹೊರಟೋಗಿದ್ದಾರೆ. ಯೋಗೇಶ್ವರ್ ಎರಡು ಬಾರಿ ಸೋತ್ತಿದ್ದಾರೆ. ಅವರನ್ನ ಗೆಲ್ಲಿಸಿ ಎಂದರು. ಎರಡು ಸಾವಿರ, ಮನೆಗೆ ಕರೆಂಟ್ ಪ್ರೀ, ಉಚಿತ ಪ್ರಯಾಣ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದರು. ಇಂಥ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದರಾ. ಅದು ಮುಂದುವರೆಬೇಕು ಅಂದ್ರೆ ನಮಗೆ ಶಕ್ತಿ ತುಂಬಬೇಕು ಎಂದರು.
ಇದೇ ವೇಳೆ ಅವರು ಬೇವೂರು ಜಿಪಂ ವ್ಯಾಪ್ತಿಯ ಮಾಕಳಿ ಗ್ರಾಮ, ಮಾಕಳಿ ಪ್ಲಾಂಟೇಷನ್ ದೊಡ್ಡಿ, ದಾಸೇಗೌಡನದೊಡ್ಡಿ, ನಾಗವಾರ, ಹಾರೋಹಳ್ಳಿದೊಡ್ಡಿ, ಬೈರನಾಯಕನಹಳ್ಳಿ, ಬೇವೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್, ಬಿಎಂಐಸಿಎಪಿಎ ಅಧ್ಯಕ್ಷ ರಘನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿಅಶ್ವತ್ಥ್ ಅನೇಕರು ಸಾಥ್ ನೀಡಿದರು.