ಹಾಸನ: ಹಾಸನ ಜಿಲ್ಲೆ ಹಾಗೂ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮೈಸೂರು ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಪತ್ತೆಯಾಗಿದ್ದಾರೆ.ಶಾಲೆಗೆ ಹೋಗುವುದಾಗಿ ಹೇಳಿ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿಯ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿದ್ದರು.
ನಾಪತ್ತೆಯಾಗಿರುವ ಮೂವರು ವಿದ್ಯಾರ್ಥಿಗಳನ್ನು ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬುವವರ ಮಕ್ಕಳಾಗಿದ್ದು, ಶರತ್ (16), ಧನಂಜಯ್ (16), ಮುರುಳಿ (16) ಎಂದು ಗುರುತಿಸಲಾಗಿತ್ತು.ಮೂವರು ವಿದ್ಯಾರ್ಥಿಗಳು ಕುನಿಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ 7:30ಕ್ಕೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು.
ಮೂವರು ಶಾಲೆಗೆ ಬಾರದ ಹಿನ್ನೆಲೆ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಗಾಬರಿಗೊಂಡ ಪೋಷಕರು ತಮ್ಮ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.ಇಂದು ಮಕ್ಕಳು ಮೈಸೂರಿನಲ್ಲಿ ಪತ್ತೆಯಾಗಿದ್ದು ಅವರನ್ನು ಕರೆ ತರಲು ಪೊಲೀಸರು ಮೈಸೂರಿಗೆ ತೆರಳಿದ್ದಾರೆ.
ಮತ್ತೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನವರಿ 18ರಂದು ಬೆಂಗಳೂರಿನ ಜಯನಗರದಿಂದ ಪ್ರವೀಣ್ ಹಾಗೂ ರವಿ ಎಂಬ 13, 14 ವರ್ಷದ ಬಾಲಕರು ನಾಪತ್ತೆಯಾಗಿದ್ದರು. ಅವರು ಇಂದು ಚಾಮರಾಜನಗರ ಜಿಲ್ಲೆಯ ಮಲೇ ಮಹಾದೇಶ್ವರ್ ದೇವಸ್ಥಾನದ ಬಳಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.