ರಾಮನಗರ: ಇನ್ಫೋಸಿಸ್ ನಾರಾಯಣಮೂರ್ತಿ ವಾರಕ್ಕೆ 70 ಗಂಟೆ ಹಾಗೂ ಎಲ್ ಅಂಡ್ ಟಿ ಮುಖ್ಯಸ್ಥ ಎಸ್.ಎನ್ .ಸುಬ್ರಮಣಿಯನ್ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ನೀಡಿರುವ ಹೇಳಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಐಜೂರು ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಎಲ್ ಅಂಡ್ ಟಿ ಮುಖ್ಯಸ್ಥ ಎಸ್.ಎನ್ .ಸುಬ್ರಮಣಿಯನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.ನಾರಾಯಣಮೂರ್ತಿ ಮತ್ತು ಎನ್.ಎನ್ .ಸುಬ್ರಮಣಿಯನ್ ಮಾನವ ದ್ರೋಹಿಗಳು. ಮನೆಯಲ್ಲಿ ಹೆಂಡತಿ ಮುಖ ನೋಡಿಕೊಂಡು ಕುಳಿತುಕೊಳ್ಳಬೇಡಿ ಎಂಬ ಅವರ ಮಾತುಗಳು ಪತಿ ಮತ್ತು ಪತ್ನಿಗೆ ಅಗೌರವ ತೋರಿದಂತಾಗಿದೆ. ವಾರದಲ್ಲಿ 70 ಮತ್ತು 90 ಗಂಟೆ ಕೆಲಸ ಮಾಡಿದರೆ ಮನುಷ್ಯನ ಜೀವನದ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.
ನೌಕರರ ಹೆಗಲ ಮೇಲೆ ಕುಳಿತುಬೆನ್ನು ಮೂಳೆ ಮುರಿಯುವ ಸಂಸ್ಕೃತಿ ಸರಿಯಲ್ಲ. ದೇಶದ ಉದ್ಧಾರದ ಬಗ್ಗೆ ಇವರಿಂದ ಬುದ್ಧಿ ಕಲಿಯಬೇಕಾಗಿಲ್ಲ. ಇವರು ನೌಕರರನ್ನು ನರಕಯಾತನೆಯಲ್ಲಿ ದುಡಿಸಿಕೊಂಡು ಸಿಕ್ಕಾಪಟ್ಟೆ ಹಣಸಂಪಾದನೆ ಮಾಡಿಕೊಳ್ಳುವುದು ಇವರ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ನಾರಾಯಣಮೂರ್ತಿರವರು ರಾಷ್ಟ್ರಪತಿ ಅವರೊಂದಿಗೆ ನೇರವಾಗಿ ಮಾತನಾಡುವಷ್ಟು ಮಟ್ಟಿಗೆ ಬೆಳೆದಿದ್ದಾರೆ. ಮನುಷ್ಯ 70 ಅಥವಾ 90 ಗಂಟೆ ದುಡಿಯಬೇಕು ಎಂಬುದು ಮೌಢ್ಯ, ಅವೈಜ್ಞಾನಿಕವಾಗಿದೆ. ಇವರಿಗೆ ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ನೂರಾರು ಕೋಟಿ ಮೌಲ್ಯದ ಭೂಮಿ ನೀಡಿದ್ದೇವೆ.
ಈಗ ಸಾವಿರಾರು ಕೋಟಿ ಸಂಪಾದನೆ ಮಾಡಿದ್ದಾರೆ. ಇತ್ತೀಚೆಗೆ ಪ್ರಪಂಚದ ಜ್ಞಾನವೇ ಇಲ್ಲದ, ಇನ್ನೂ ಕಣ್ಣನ್ನೇ ಬಿಡದ ಅವರ ಮನೆಯ ಸಣ್ಣ ಮಗುವಿನ ಹೆಸರಿನಲ್ಲಿ 400 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಇದು ನಮ್ಮ ದೇಶದ ವ್ಯವಸ್ಥೆ ತೋರಿಸುತ್ತದೆ. ಒಂದೆಡೆ ಅನ್ನಕ್ಕಾಗಿ ಕೂಗು, ಮತ್ತೊಂದೆಡೆ ದರ್ಬಾರ್ ಎಂದು ಕಿಡಿಕಾರಿದರು.ಸುಬ್ರಮಣಿಯನ್ ರವರು ಒಬ್ಬ ಮನುಷ್ಯ 90 ಗಂಟೆ ಕೆಲಸ ಮಾಡಬೇಕೆಂದು ಹೇಳುತ್ತಾರೆ. ಒಬ್ಬ ಮನುಷ್ಯ ವಾರದಲ್ಲಿ 48 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು. ಮನುಷ್ಯ ಯಂತ್ರವಲ್ಲ, ಅದು ಶರೀರ. ನಾನಾ ರೋಗಗಳು, ನೂರಾರು ಚಿಂತನೆಗಳು ಮನುಷ್ಯನಿಗೆ ಕಾಡುತ್ತಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾರದಲ್ಲಿ 70 ಅಥವಾ 90 ಗಂಟೆ ಕೆಲಸ ಮಾಡಿ ಎನ್ನುವುದು ಮಾನವ ವಿರೋಧಿ ಕೃತ್ಯ. ಈ ಕೂಡಲೇ ಇಬ್ಬರು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.
ಸುಬ್ರಮಣಿಯನ್ ಮನೆಯಲ್ಲಿ ಪತ್ನಿಯರ ಮುಖ ನೋಡಿಕೊಂಡು ಕೂರಬೇಡಿ ಎನ್ನುತ್ತಾರೆ. ಇದು ಹೆಣ್ಣಿನ ಮೇಲಿನ ದಬ್ಬಾಳಿಕೆಯನ್ನು ತೋರಿಸುತ್ತದೆ. ಮನೆಯಲ್ಲಿ ಪತಿ – ಪತ್ನಿಯರ ನಡುವೆ ಪ್ರೀತಿ, ಅಭಿಮಾನ ಇರಬೇಕು. ಪತಿಗೆ ಪತ್ನಿ ಜೊತೆಯಲ್ಲಿ ಸಾಮರಸ್ಯ ಇರಬೇಕು. ಆದರೆ, ಪತಿ -ಪತ್ನಿಯರನ್ನೇ ಬೇರೆ ಮಾಡುವ ಸುಬ್ರಮಣಿಯನ್ ಹೇಳಿಕೆ ಸ್ತ್ರೀವಿರೋಧಿಯಾಗಿದೆ. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಇವರಿಬ್ಬರ ನೀತಿಯನ್ನು ತೀವ್ರವಾಗಿ ಖಂಡಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ.ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್,ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ.ಜಯರಾಮು, ತಾಲೂಕು ಅಧ್ಯಕ್ಷ ವಿ.ಗಂಗಾಧರ್, ತಾಲೂಕು ಮಹಿಳಾ ಅಧ್ಯಕ್ಷೆ ಎನ್ .ಭಾಗ್ಯ, ಸುಧಾ, ನಗರ ಘಟಕ ಅಧ್ಯಕ್ಷ ಪ್ರಸನ್ನ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಬಿಡದಿ ಘಟಕ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಶಿವರಾಜು, ವಾಟಾಳ್ ಪಕ್ಷದ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.