ನೆಲಮಂಗಲ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 04 ರ ಟಿ.ಬೇಗೂರು ಗ್ರಾಮದಿಂದ ತ್ಯಾಮಗೊಂಡ್ಲು, ನಿಡುವಂದ ಮಾರ್ಗವಾಗಿ ತುಮಕೂರು ಗಡಿ ಸೇರುವ ರಸ್ತೆ (14.60 ಕೀ.ಮೀ) ವರೆಗೆ 31.36 ಕೋಟಿ ರೂಗಳ ಅಂದಾಜು ಮೊತ್ತದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯವನ್ನುದ್ದೇಶಿಸಿ ಮಾತ ನಾಡಿದ ಸಚಿವರು ಕ್ಷೇತ್ರಕ್ಕೆ ಉತ್ತಮ ಶಾಸಕರು ಸಿಕ್ಕಿದ್ದು, ರಸ್ತೆಯ ಬಗ್ಗೆ ಅನೇಕ ಬಾರಿ ನನ್ನ ಬಳಿ ಬಂದು ಚರ್ಚೆ ಮಾಡಿದ್ದರು. ಅವರ ಒತ್ತಾಯದ ಮೇರೆಗೆ ಸ್ಥಳಕ್ಕೆ ಬಂದು ವಾಸ್ತವತೆ ನೋಡಿದ್ದೇನೆ. ಮುಂದಿನ ಆರ್ಥಿಕ ವರ್ಷದಲ್ಲಿ ಶಾಸಕರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ನೆಲ ಮಂಗಲ, ದಾಬಸ್ ಪೇಟೆವರಗಿನ ರಸ್ತೆ ಗಳನ್ನೂ ಅಭಿವೃದ್ದಿ ಹಾಗೂ ತುಮಕೂರು ಗ್ರಾಮಾಂತರ ಗಡಿಭಾಗದವರಗೆ ರಸ್ತೆಗಳ ಅಭಿವೃದ್ದಿ ಮಾಡಲಾಗುವುದು ಎಂದರು.
ರಸ್ತೆಗಳ ಪರಿಶೀಲನೆ: ರೈಲ್ವೆ ಗೊಲ್ಲಹಳ್ಳಿ ರಸ್ತೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರು ರಸ್ತೆ ಸ್ಥಿತಿಗತಿ ಪರಿಶೀಲಿಸಿ ಜನರಿಗೆ ಅಗತ್ಯವಾಗಿರುವ ರಸ್ತೆಯ ಕಾಮಗಾರಿ ಇಷ್ಟು ವಿಳಂಬವಾಗಿರುವುದು ಬೇಸರದ ಸಂಗತಿ ಎಂದ ಅವರು ಅಧಿಕಾರಿಗಳಿಂದ ಕಾಮಗಾರಿಯ ವಿವರ, ವಿಳಂಬಕ್ಕೆ ಕಾರಣ ಪಡೆದು ಸರ್ವಿಸ್ ರಸ್ತೆಯ ಜತೆ ಮೇಲ್ಲೇತುವೆ ಕಾಮಗಾರಿಗೆ ವೇಗ ನೀಡಬೇಕು ಎಂದು ಸೂಚನೆ ನೀಡಿದರು.
ಶಾಸಕ ಎನ್.ಶ್ರೀನಿವಾಸ್ ರವರು ಸಚಿವರಾದ ಸತೀಶ್ ಜಾರಕಿಹೊಳಿಯವರಿಗೆ ರಸ್ತೆಯ ಮಹತ್ವದ ಬಗ್ಗೆ ತಿಳಿಸಿ ಅನುದಾನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೆಲಮಂಗಲ ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸ್ ವಿಧಾನಪರಿಷತ್ ಸದಸ್ಯರಾದ ರವಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ನಾರಾಯಣ ಗೌಡ, ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಉಪಸ್ಥಿತರಿದ್ದರು.