ಚಿಂತಾಮಣಿ: ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಗುರು ಹುಣ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯಲಿರುವ ಗುರುಪೂಜಾ ಸಂಗೀತೋತ್ಸವವು ನಾಳೆಯಿಂದ (19.7.2024 ಶುಕ್ರವಾರ) ಪ್ರಾರಂಭವಾಗಲಿದೆ.ಚಿಂತಾಮಣಿ ತಾಲ್ಲೂಕಿನ ಶ್ರಿಕ್ಷೇತ್ರ ಕೈವಾರ ನಾಡಿನ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಬೆಟ್ಟದ ತಪ್ಪಲಿನಲ್ಲಿರುವ ಕೈವಾರ ಕ್ಷೇತ್ರವು ಆಷಾಢ ಮಾಸದ ಹುಣ್ಣಿಯ ದಿನಗಳಲ್ಲಿ ಸಿಂಗರಿಸಿಕೊಳ್ಳುತ್ತದೆ.
ಗುರುಪೌರ್ಣಮಿಯ ಪ್ರ ಯುಕ್ತ ಇಲ್ಲಿ ವಿಶೇಷವಾಗಿ ಗುರುಪೂಜೆ ಹಾಗೂ 72 ಗಂಟೆಗಳ ನಿರಂತರ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.
ಗುರುಪೂಜಾ ಸಂಗೀತೋತ್ಸವಕ್ಕೆ ಬರುವ ಭಕರ್ತ ಅನುಕೂಲಕ್ಕಾಗಿ ವಿಶಾಲವಾದ ಪೆಂ ಡಾಲ್ ಹಾಕಲಾಗಿದೆ. ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.
ಜುಲೈ 19 ಶುಕ್ರವಾರ ಪ್ರಾತ:ಕಾಲ 5.30 ಗಂಟೆಗೆ ಘಂಟಾನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಗುತ್ತದೆ. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹವನ್ನು ಸಭಾಂಗಣಕ್ಕೆ ಕರೆತಂದು ವೇದಿಕೆಯಲ್ಲಿ ಆಸೀನಗೊಳಿಸಿ ಪೂಜೆಗಳನ್ನು ಸಲ್ಲಿಸಿ ಸಂಗೀತೋತ್ಸವವನ್ನು ಪ್ರಾರಂಭಗೊಳಿಸಲಾಗುತ್ತದೆ. ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಸಾಮೂಹಿಕ ನಾಮಸಂಕೀರ್ತನೆಯನ್ನು ಸಮರ್ಪಣೆಗೊಳಿಸಲಾಗುತ್ತದೆ. ನಂತರ ವಿವಿಧ ಕಲಾವಿದರಿಂದ ಸಂಗೀತದ ಸಮರ್ಪಣೆಯಾಗುತ್ತದೆ.
ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 19 ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗುವ ಗುರುಪೂಜಾ ಸಂಗೀತೋತ್ಸವವು ಜುಲೈ 22 ಸೋಮವಾರ ಬೆಳಿಗ್ಗೆ 6 ಗಂಟೆಗೆ ಮುಕ್ತಾಯವಾಗುತ್ತದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕಲಾವಿದರೊಂದಿಗೆ ನಾಡಿನ ಪ್ರಸಿದ್ಧ ಸಂಗೀತಗಾರರು ಭಾಗವಹಿಸುತ್ತಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಜನಾ ಭಕ್ತರ ತಂಡಗಳು ಭಾಗವಹಿಸುತ್ತಾರೆ.
ಈ ಮೂರು ದಿನಗಳ ಕಾಲ ಸಾಮೂಹಿಕ ಭಜನೆ, ನಾದಸ್ವರ, ಹರಿಕಥೆ, ಬುರ್ರಕಥೆ, ಸಂಗೀತ ಕಛೇರಿ, ಭರತನಾಟ್ಯ, ಕೂಚಿಪುಡಿ ನೃತ್ಯ, ಕಥಾಕೀರ್ತನೆ, ವೀಣಾವಾದನ, ಕೊಳಲುವಾದನ, ವೀರಗಾಸೆ, ಡೊಳ್ಳುಕುಣಿತ, ಪಂಡರಿ ಭಜನೆ, ಕೋಲಾಟ, ತೊಗಲುಬೊಂಬೆ ಇತ್ಯಾದಿ ನಾನಾ ಪ್ರಕಾರದ ಕಲೆಗಳು ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ಸಮರ್ಪಣೆಯಾಗಲಿದೆ.