“ನಾಳೆಯಿಂದ ಮೂರು ದಿನ ಉಡುಪಿಯ ಪರ್ಯಾಯ ಪುತ್ತಿಗೆ ಮಠದಲ್ಲಿ ಶ್ರೀ ವಿಜಯ ದಾಸರ ಆರಾಧನಾಂಗವಾಗಿ ಶ್ರೀನಿವಾಸ ಉತ್ಸವ ಬಳಗದವರಿಂದ ಹರಿದಾಸ ಸಾಹಿತ್ಯ ಅಂತರಾಷ್ಟ್ರೀಯ ಸಮ್ಮೇಳನ ” ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗ ಸಂಯುಕ್ತ ಆಶ್ರಯದಲ್ಲಿ ವಿಜಯದಾಸರ ಆರಾಧನಾ ಅಂಗವಾಗಿ ಹರಿದಾಸ ಸಾಹಿತ್ಯ ಅಂತರಾಷ್ಟ್ರೀಯ ಸಮ್ಮೇಳನವನ್ನು
ನವಂಬರ್ ೯ ಬೆಳಿಗ್ಗೆ ೯:೩೦ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಮ್ಮೇಳನವನ್ನು ಉದ್ಘಾಟಿಸುವರು,ಕಿರಿಯ ಪಟ್ಟ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ದಿಕ್ಸೂಚಿ ಭಾಷಣವನ್ನು ಮಾಡುವರು.
ಖ್ಯಾತ ದಾಸ ಸಾಹಿತ್ಯ ಸಂಶೋಧಕ ಡಾ. ಎ.ಬಿ. ಶ್ಯಾಮಾಚಾರ್ಯರು ಸಮ್ಮೇಳನದ ಅಧ್ಯಕ್ಷ ರಾಗಿರುತ್ತಾರೆ. ಅವರು ರಚಿಸಿರುವ ‘ವಿಜಯ ಚಿಂತನಾಮೋದ’ ಹಾಗು ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ ಗೋಪಾಲಾಚಾರ್ಯ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಸಂಸ್ಕೃಂತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದಲ್ಲಿ ಸಮ್ಮೇಳನದಲ್ಲಿ ಮಂಡಿಸುವ ಪ್ರಬಂಧಗಳ ಸಂಕಲನ ‘ವಿಜಯ ವಿಠಲ’ ಕೃತಿಗಳು ಹಾಗೂ ಸರ್ವಜ್ಞ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಲೋಕಾರ್ಪಣೆಯಾಗಲಿದೆ.
ಸೇಡಂನ ದಾಸಧೇನು ಟ್ರಸ್ಟ್ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ಭಾಷಣ ಮಾಡುವರು. ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಡಾ.ಮುದ್ದು ಮೋಹನ್ ರವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ ೧೦ ಭಾನುವಾರ ಬೆಳಿಗ್ಗೆ ೯.೦೦ರಿಂದ ಕಲಿಯುಗದ ಆರಾಧ್ಯ ದೈವ ತಿರುಮಲ ಶ್ರೀನಿವಾಸನ ವೈಭವದ ಕಲ್ಯಾಣ ಮಹೋತ್ಸವ- ಶ್ರೀನಿವಾಸ ಉತ್ಸವ ಬಳಗದ ತಾಯಲೂರು ವಾದಿರಾಜ ನೇತೃತ್ವದಲ್ಲಿ ಡಾ. ಬಿ ಗೋಪಾಲಾಚಾರ್ಯರ ವ್ಯಾಖ್ಯಾನ,ವಿದ್ವಾನ್ ಡಾ.ರಾಯಚೂರು ಶೇಷಗಿರಿ ದಾಸ್ ಮತ್ತು ವಿದುಷಿ ಶುಭ ಸಂತೋಷ ರವರ ಗಾಯನದೊಂದಿಗೆ ನಡೆಯಲಿದೆ . ಕಲಬುರ್ಗಿಯ ಉದ್ಯಮಿ ಸಂಜೀವ ಗುಪ್ತ, ದಾಸ ಸೌರಭದ ಪಾಂಡುರAಗ ರಾವ್ ಕಂಪ್ಲಿ ಮತ್ತು ಕೆ ಆರ್ ಗುರುರಾಜ ರಾವ್ ಕುಟುಂಬದವರು ವಿಶೇಷ ಸೇವಾಕರ್ತರಾಗಿರುತ್ತಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಉಡುಪಿ ತಾಲೂಕು ಇವರ ಸಹಯೋಗದಲ್ಲಿ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಸಹಸ್ರ ಕಂಠ ಗಾಯನ ಮತ್ತು ಭಜನಾ ಮಂಡಳಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಾಫಲ್ಯ ಮೂವೀಸ್ ನಿರ್ಮಾಣದ ಭಕ್ತಿ ಪ್ರಧಾನ ‘ಸಂಕೀರ್ತನ ‘ ಚಲನಚಿತ್ರ ಟೀಸರ್ ಬಿಡುಗಡೆಗೊಳ್ಳಲಿದೆ.
ಶ್ರೀ ವಿಜಯ ದಾಸರ ಆರಾಧನಾ ಮಹೋತ್ಸವ – ನವೆಂಬರ್ ೧೧ ಸೋಮವಾರ ಪ್ರಬಂಧ ಮಂಡನೆ, ಸಂಜೆ ಐದರಿಂದ ಪರ್ಯಾಯ ಶ್ರೀಪಾದದ್ವಯರ ದಿವ್ಯ ಉಪಸ್ಥಿತಿಯಲ್ಲಿ ರಥ ಬೀದಿಯಲ್ಲಿ ಶ್ರೀ ವಿಜಯದಾಸರ ಭಾವಚಿತ್ರದ ಶೋಭಾ ಯಾತ್ರೆ, ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ, ಹಿರಿಯ ವೈದ್ಯ -ಕಲಾಪೋಷಕ ಡಾ. ಎಂ ಆರ್ ವಿ ಪ್ರಸಾದ್ ರವರಿಗೆ ಮಧ್ವ ಪುರಂದರ ಪ್ರಶಸ್ತಿ ಪ್ರದಾನ, ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗದ ಸಹ ನಿರ್ದೇಶಕ ಡಾ. ಬಿ ಎಸ್ ಅನಿಲ ಕುಮಾರ ಬೊಮ್ಮಘಟ್ಟ ರವರು ಸಮಾರೋಪ ನುಡಿಗಳನ್ನಾಡುವರು.
ಶ್ರೀವಾರಿ ಫೌಂಡೇಶನ್ ಅಧ್ಯಕ್ಷ ಎಸ್.ವೆಂಕಟೇಶಮೂರ್ತಿ, ಭಾರತ ವಿಕಾಸ ಸಂಗಮ ಮಹಿಳಾ ವಿಭಾಗದ ಹುಬ್ಬಳ್ಳಿಯ ರೂಪಾ ಢವಳಗಿ,ಹರಿದಾಸ ಸಂಪದ ಟ್ರಸ್ಟ್ ಕಾರ್ಯದರ್ಶಿ ಮಧುಸೂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಂದು ಪುತ್ತಿಗೆ ಮಠದ ದಿವಾನರು ಮತ್ತು ಶ್ರೀನಿವಾಸ ಉತ್ಸವ ಬಳಗದ ಟಿ ವಾದಿರಾಜರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ವಿವರಗಳಿಗೆ ೯೮೮೬೧೦೮೫೫೦/೯೭೩೯೩೬೯೬೨೧ ಸಂಪರ್ಕಿಸಿ.