ಬೆಂಗಳೂರು: ನಾಳೆಯಿಂದ ಈ ತಿಂಗಳ 22 ರವರೆಗೆ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಲಿಯಲಿದೆ.ಹೆಸರಾಂತ ಜಾನಪದ ವಿದ್ವಾಂಸ ನಾಡೋಜ ಡಾ. ಗೋ.ರು.ಚನ್ನಬಸಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮ್ಮೇಳನ ಯಶಸ್ವಿಗೆ ಸಕಲ ಸಿದ್ದತೆಗಳು ನಡೆದಿದ್ದು, ಸಂಸದ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಸಮ್ಮೇಳನಕ್ಕಾಗಿ ಸಕಲ ಸಿದ್ದತೆಗಳು ನಡೆದಿದ್ದು ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಮ್ಮೇಳನದಲ್ಲಿ ಭಾಗವಹಿಸಲು ಬರುವ ಜನರಿಗಾಗಿ ಪ್ರತಿ ತಾಲ್ಲೂಕಿಗೆ 15 ಬಸ್ಗಳಂತೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಬರುವ ಸಾಹಿತ್ಯಾಸಕ್ತರಿಗಾಗಿ ವಿವಿಧ ಬಗೆಯ ಖಾದ್ಯಗಳ ತಯಾರಿ ನಡೆದಿದ್ದು, ಭೋಜನಕ್ಕಾಗಿ 140 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಕೃಷ್ಣರಾಜಸಾಗರ ಜಲಾಶಯ ಮಾದರಿಯಲ್ಲಿ ಸಮಾರಂಭದ ವೇದಿಕೆ ನಿರ್ಮಾಣ ಮಾಡಲಾಗಿದೆ.