ನವದೆಹಲಿ: ನಿನ್ನೆ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಾಳೆ ದೆಹಲಿ ರಾಜ್ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.
ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ನಿನ್ನೆ ರಾತ್ರಿಯೇ ಅವರ ನಿವಾಸಕ್ಕೆ ತರಲಾಗಿದೆ. ಇಂದು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ.ಏತನ್ಮಧ್ಯೆ, ಮನಮೋಹನ್ ಸಿಂಗ್ ನಿಧನದ ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಮತ್ತು 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ನಾಳೆ ಬೆಳಿಗ್ಗೆ 8 ಗಂಟೆ ವೇಳೆಗೆ ಸಿಂಗ್ ಅವರ ಪಾರ್ಥೀವ ಶರೀರವನ್ನು ಎಐಸಿಸಿ ಕಚೇರಿಗೆ ತರಲಾಗುವುದು. ನಂತರ ಅಲ್ಲಿಯೂ ಪಕ್ಷದ ಮುಖಂಡರು ಕಾರ್ಯಕರ್ತರ ದರ್ಶನಕ್ಕೆ 10 ಗಂಟೆವರೆಗೂ ಅವಕಾಶ ಕಲ್ಪಿಸಲಾಗಿದೆ.ಎಐಸಿಸಿ ಕಚೇರಿಯಿಂದಲೇ ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ಆರಂಭಗೊಳ್ಳಲಿದ್ದು, ರಾಜ್ಘಾಟ್ ಬಳಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ದೇಶದ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮನಮೋಹನ್ ಅವರ ಮಗಳು ವಿದೇಶದಿಂದ ಬರಬೇಕಿದ್ದು, ಇಂದು ರಾತ್ರಿ ಒಂದು ಘಂಟೆ ವೇಳೆಗೆ ದೇಹಲಿ ತಲುಪಲಿದ್ದಾರೆ. ಆ ನಂತರವೇ ಎಲ್ಲದರ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್, ಅನಾರೋಗ್ಯದಿಂದಾಗಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು. ನಿಧನದ ಹಿನ್ನೆಲೆಯಲ್ಲಿ ದೇಶದಲ್ಲಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.