ಬೆಂಗಳೂರು: ಪರ, ವಿರೋಧದ ಚರ್ಚೆ ನಡುವೆಯೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಗುರುವಾರ (ಜ.16) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು ನಂತರ ವಿಷಯಗಳನ್ನು ಸಾರ್ವಜನಿಕಗೊಳಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ವರದಿಯನ್ನು ಆಧರಿಸಿದ ಯಾವುದೇ ನಿರ್ಧಾರವು ಸರ್ಕಾರದ ವಿಶೇಷಾಧಿಕಾರವಾಗಿದ್ದು, ವಿಶ್ಲೇಷಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಕಳೆದ ವರ್ಷ ಫೆಬ್ರವರಿ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿತ್ತು, ಸಮಾಜದ ಕೆಲವು ವರ್ಗಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ನ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದರು.
ವರದಿಯ ಮುಚ್ಚಿದ ಲಕೋಟೆಯನ್ನು ಸಂಪುಟದ ಮುಂದೆ ತೆರೆಯಲು ನಿರ್ಧರಿಸಲಾಗಿದೆ, ಇಲ್ಲದಿದ್ದರೆ ಅದು ಮಾಹಿತಿ ಸೋರಿಕೆಗೆ ಕಾರಣವಾಗಬಹುದು ಎಂದಿದ್ದಾರೆ. ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತದೆಯೋ ಇಲ್ಲವೋ, ನಾನು ಈಗ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಒಮ್ಮೆ ಮುಚ್ಚಿದ ಲಕೋಟೆ ತೆರೆದ ನಂತರ ಕನಿಷ್ಠ ಮಾಹಿತಿ ನಮಗೆ ತಿಳಿಯುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ವರದಿ ಮತ್ತು ಅದರ ಶಿಫಾರಸುಗಳ ಅನುಷ್ಠಾನಕ್ಕೆ ಕೆಲವು ಪ್ರಬಲ ವರ್ಗಗಳ ವಿರೋಧದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವು 160 ಕೋಟಿ ತೆರಿಗೆದಾರರ ಹಣವನ್ನು ಖರ್ಚು ಮಾಡಿದ ನಂತರ ವರದಿಯನ್ನು ಪಡೆದುಕೊಂಡಿದೆ, ಕನಿಷ್ಠ ಪಕ್ಷ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ತಿಳಿಸಿದರು.
ವರದಿ ಅನುಷ್ಠಾನಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು, ಇದರ ಬಗ್ಗೆ ಸರ್ಕಾರವು ಅಂತಿಮವಾಗಿ ನಿರ್ಧರಿಸುತ್ತದೆ. ಆದರೆ ಕನಿಷ್ಠ 160 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾದ ವರದಿಯಿಂದ ಮಾಹಿತಿ ಹೊರಬರಬೇಕು. ಆದ್ದರಿಂದ ವರದಿಯಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆ ಇದೆ ಎಂದು ಅವರು ಹೇಳಿದರು.
ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರು ಈ ಸಮೀಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು “ಅವೈಜ್ಞಾನಿಕ” ಎಂದು ಕರೆದಿದ್ದಾರೆ. ಈ ವರದದಿಯನ್ನು ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ರಾಜ್ಯಾದ್ಯಂತ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 1.33 ಲಕ್ಷ ಶಿಕ್ಷಕರು ಸೇರಿದಂತೆ 1.6 ಲಕ್ಷ ಅಧಿಕಾರಿಗಳು ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿತ್ತು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಒಕ್ಕಲಿಗ ಸಮುದಾಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವರದಿ ಮತ್ತು ದತ್ತಾಂಶವನ್ನು ತಿರಸ್ಕರಿಸಬೇಕೆಂದು ಕೋರಿ ಮುಖ್ಯಮಂತ್ರಿಗೆ ಸಮುದಾಯವು ಈ ಹಿಂದೆ ಸಲ್ಲಿಸಿದ ಮನವಿಗೆ ಸಹಿ ಹಾಕಿದ್ದರು.
ವೀರಶೈವ-ಲಿಂಗಾಯತರ ಸರ್ವೋಚ್ಚ ಸಂಸ್ಥೆಯಾದ ಅಖಿಲ ಭಾರತ ವೀರಶೈವ ಮಹಾಸಭಾವು ಸಮೀಕ್ಷೆಗೆ ಅಸಮ್ಮತಿ ವ್ಯಕ್ತಪಡಿಸಿ ಹೊಸ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದೆ, ಇದರ ನೇತೃತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸಿದ್ದಾರೆ. ಹಲವಾರು ಲಿಂಗಾಯತ ಸಚಿವರು ಮತ್ತು ಶಾಸಕರು ಸಹ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ.