ಬೆಂಗಳೂರು: ಇತ್ತೀಚೆಗೆ ಸಚಿವ ಜಾರಕಿಹೊಳಿಯವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸಚಿವ, ಶಾಸಕರ ಔತಣಕೂಟದ ಬೆನ್ನಲ್ಲೇ ಇದೀಗ ನಾಳೆ ಗೃಹಸಚಿವ ಡಾ.ಜಿ. ಪರಮೇಶ್ವರ್ ತಮ್ಮ ಸಮುದಾಯದ ಸಚಿವ, ಶಾಸಕ, ಮಾಜಿ ಶಾಸಕರಿಗೆ ಡಿನ್ನರ್ ಏರ್ಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಏರ್ಪಡಿಸಿದ್ದ ಔತಣಕೂಟ ಸಾಕಷ್ಟು ಚರ್ಚೆಗೆ ಗ್ರಾಸವಾದ ಬೆನ್ನಲ್ಲೆ ಇದೀಗ ಪರಮೇಶ್ವರ್ ಅವರ ಡಿನ್ನರ್ ಏರ್ಪಾಟು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನಾಳೆ ನಾನು ಡಿನ್ನರ್ ಮಾತ್ರ ಕೊಡ್ತಿದ್ದೇನೆ, ಡಿನ್ನರ್ ಪಾರ್ಟಿ ಅಲ್ಲ ಎಂದು ಸ್ವತಃ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.ಮುಂದೆ ನಾವು ಎಸ್ಸಿ, ಎಸ್ಟಿಸಮಾವೇಶ ಮಾಡಬೇಕು ಅನ್ಕೊಂಡಿದ್ದೀವಿ. ಅದಕ್ಕಾಗಿ ಎಲ್ಲಾ ಎಸ್ಸಿ-ಎಸ್ಟಿ ಸಮುದಾಯದ ಸಚಿವರು, ಶಾಸಕರನ್ನ ಕರೆದಿದ್ದೇವೆ ಪಕ್ಷದ ವ್ಯಾಪ್ತಿಯಲ್ಲಿಯೇ ಅನುಮತಿ ಪಡೆದು ಸಭೆ ನಡೆಸ್ತೇವೆ.
ನಾಳೆ ಸಂಜೆ ಏಳು ಗಂಟೆಗೆ ಕರೆದಿದ್ದೇವೆ.ಎಸ್ಸಿ, ಎಸ್ಟಿ ಬಿಟ್ಟು ಬೇರೆಯವರಿಗೆ ಆಹ್ವಾನ ಇಲ್ಲ, ಬರಬಾರದು ಅಂತ ಇಲ್ಲ. ಈ ಹಿಂದೆ ಚಿತ್ರದುರ್ಗದಲ್ಲಿ ಎಸ್ಸಿ ಎಸ್ಟಿ ಸಮಾವೇಶ ಆಯ್ತು, ಆ ಸಮಾವೇಶದಲ್ಲಿ ಕೆಲವು ರೆಸೊಲ್ಯುಷನ್ಸ್ ತಗೊಂಡಿದ್ವಿ, ಅದರ ಬಗ್ಗೆಯೂ ನಾಳೆ ಚರ್ಚೆ ಮಾಡ್ತೇವೆ ಎಂದಿದ್ದಾರೆ.