ಬೊಮ್ಮನಹಳ್ಳಿ: ನಗರದ ಹೆಚ್ಎಸ್ಆರ್ ಬಡಾವಣೆಯ ಪರಂಗಿಪಾಳ್ಯ ಹತ್ತಿರ ನವೆಂಬರ್ ೧೦ ರ ಭಾನುವಾರದಂದು ಮದ್ಯಾಹ್ನ ೧೨ ರಿಂದ ೧೨:೪೫ ರವರೆಗೆ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಪ್ರಯುಕ್ತವಾಗಿ ಇದೇ ಮೊದಲ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ಆಯೋಜಕರಾದ ಅನಿಲ್ ರೆಡ್ಡಿ ರವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ಪ್ರಥಮ ಬಾರಿಗೆ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಪ್ರಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಟಗರು, ದ್ವಿತೀಯ ಬಹುಮಾನವಾಗಿ ಕುರಿ ಪಟ್ಲಿ, ಮೂರನೇ ಬಹುಮಾನವಾಗಿ ಎರಡು ನಾಟಿ ಕೋಳಿ ವಿತರಣೆ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ೩೨ ಇಂಚಿನ ಟಿವಿ, ದ್ವಿತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್ , ತೃತೀಯ ಬಹುಮಾನವಾಗಿ ಕಿಚನ್ ಸೆಟ್ ನೀಡಲಾಗುವುದು.
ಪ್ರವೇಶ ಸಂಪೂರ್ಣವಾಗಿ ಉಚಿತವಾಗಿದ್ದು ಮೊದಲು ಹೆಸರು ನೋಂದಾವಣೆ ಮಾಡುವ ೧೨೫ ಜನರಿಗೆ ಆದ್ಯತೆ ನೀಡಲಾಗುತ್ತದೆ. ೪೫ ನಿಮಿಷಗಳ ಕಾಲ ಮಿತಿಯನ್ನು ನೀಡಲಿದ್ದು ಮಧ್ಯಪಾನ ಮಾಡಿದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೯೧೬೫೦೬೮೩೭ಗೆ ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟನೆ ಮಾಡಲಿದ್ದು, ಸಚಿವರಾದ ರಾಮಲಿಂಗಾರೆಡ್ಡಿ ಬಹುಮಾನ ವಿತರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ಮಾಪಕ ಉಮಾಪತಿಗೌಡ,ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ಗೌಡ, ಭಾರತೀಯ ಸೇವಾ ಸಮಿತಿ ರಾಷ್ಟಿçÃಯ ಅಧ್ಯಕ್ಷ ಡಾ.ಹೆಚ್.ಎಂ.ರಾಮಚಂದ್ರ, ಚಿತ್ರ ನಿರ್ಮಾಪಕ ಕೆ.ಮಂಜು ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ವಾಸುದೇವರೆಡ್ಡಿಯವರು ವಹಿಸಿಕೊಳ್ಳಲಿದ್ದಾರೆ.