ನವದೆಹಲಿ: ಇಂದು ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರೊಂದಿಗೆ ತಮ್ಮ ಮೊದಲ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ, ಸ್ಥಳೀಯ ಶಾಲೆಯಲ್ಲಿನ ಶಿಕ್ಷಣ, ಅವರು ಈಜುವುದನ್ನು ಕಲಿತಿದ್ದು ಹೇಗೆ, ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರ ಬಟ್ಟೆಗಳನ್ನು ಹೇಗೆ ತೊಳೆಯುತ್ತಿದ್ದರು ಎಂಬುದೆಲ್ಲದರ ಕುರಿತು ಮಾತನಾಡಿದ್ದಾರೆ.
ನಿಖಿಲ್ ಕಾಮತ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಆರಂಭಿಕ ಜೀವನದ ಬಗ್ಗೆ ಮಾತನಾಡುತ್ತಾ ಪ್ರಧಾನಿ ಮೋದಿ, “ನಾನು ನನ್ನ ಕುಟುಂಬದ ಎಲ್ಲ ಸದಸ್ಯರ ಬಟ್ಟೆಗಳನ್ನು ತೊಳೆಯುತ್ತಿದ್ದೆ. ಅದಕ್ಕಾಗಿಯೇ ನನಗೆ ಕೊಳಕ್ಕೆ ಹೋಗಲು ಅವಕಾಶ ನೀಡಿದ್ದರು. ಬಟ್ಟೆ ತೊಳೆಯಲು ಕೊಳಕ್ಕೆ ಹೋದಾಗ ಅಲ್ಲೇ ಈಜಾಡುವುದನ್ನು ಕಲಿತೆ. ಅದರಿಂದ ನನಗೆ ಈಜಿನಲ್ಲಿ ಬಹಳ ಆಸಕ್ತಿ ಬೆಳೆಯಿತು” ಎಂದು ಮೋದಿ ಹೇಳಿದ್ದಾರೆ.
“ನಾನು ಮೊದಲ ಬಾರಿ ಗುಜರಾತ್ನ ಮುಖ್ಯಮಂತ್ರಿಯಾದಾಗ ನನ್ನ ಸ್ನೇಹಿತರು ಮತ್ತು ಶಿಕ್ಷಕರನ್ನು ಮುಖ್ಯಮಂತ್ರಿಯ ನಿವಾಸಕ್ಕೆ ಆಹ್ವಾನಿಸಿದ್ದೆ ಎಂದು ಸಹ ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾದಾಗ, ನನ್ನ ಹಳೆಯ ಸ್ನೇಹಿತರನ್ನು ಮುಖ್ಯಮಂತ್ರಿಯ ಸರ್ಕಾರಿ ನಿವಾಸಕ್ಕೆ ಆಹ್ವಾನಿಸಲು ಬಯಸಿದ್ದೆ. ನಾನು ಅವರೆಲ್ಲರನ್ನೂ ಆಹ್ವಾನಿಸಿದೆ. ಆದರೆ ಅವರು ನನ್ನನ್ನು ಕೇವಲ ಮುಖ್ಯಮಂತ್ರಿಯಾಗಿ ನೋಡಿದರೇ ವಿನಃ ಹಿಂದಿನ ಸ್ನೇಹಿತನಾಗಿ ಯಾರೂ ನೋಡಲಿಲ್ಲ. ನನಗೆ ಅದು ಇಷ್ಟವಾಗಲಿಲ್ಲ” ಎಂದು ಪ್ರಧಾನಿ ಹೇಳಿದರು.
ತಮ್ಮ ರಾಜಕೀಯ ಪ್ರಯಾಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಮೊದಲ ಅವಧಿಯಲ್ಲಿ ಜನರು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು ಮತ್ತು ನಾನು ದೆಹಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಎರಡನೇ ಅವಧಿಯಲ್ಲಿ, ನಾನು ಹಿಂದಿನ ದೃಷ್ಟಿಕೋನದಿಂದ ಯೋಚಿಸಿದೆ. ಈಗ, ಮೂರನೇ ಅವಧಿಯಲ್ಲಿ ನನ್ನ ಚಿಂತನೆ ರೂಪಾಂತರಗೊಂಡಿದೆ. ನನ್ನ ನೈತಿಕತೆ ಹೆಚ್ಚಾಗಿದೆ ಮತ್ತು ರಾಷ್ಟ್ರಕ್ಕಾಗಿ ನನ್ನ ಕನಸುಗಳು ದೊಡ್ಡದಾಗಿವೆ” ಎಂದು ಹೇಳಿದ್ದಾರೆ.