ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ ಎಂಬ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹಾಗೂ ಜೆಡಿಯು ನಾಯಕ ಲಲ್ಲನ್ ಸಿಂಗ್ ಅವರು, ತಮ್ಮ ಪಕ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ಡಿಎ)ದ ಜತೆಗಿದೆ ಎಂದು ಗುರುವಾರ ಹೇಳಿದ್ದಾರೆ.
“…ನಾವು ಎನ್ಡಿಎ ಜೊತೆಗಿದ್ದೇವೆ ಮತ್ತು ಸಂಪೂರ್ಣ ಮೈತ್ರಿಗೆ ಬದ್ಧವಾಗಿದ್ದೇವೆ. ಬೇರೆಯವರು ಹೇಳುವುದಕ್ಕೆ ನಾನು ಪ್ರತಿಕ್ರಿಯಿಸಲಾರೆ. ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ; ಜನರು ಏನು ಬೇಕಾದರೂ ಹೇಳಬಹುದು ಎಂದು ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸಿಎಂ ನಿತೀಶ್ ಕುಮಾರ್ಗೆ ಪ್ರತಿಪಕ್ಷಗಳ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ ಎಂದು ಲಾಲು ಪ್ರಸಾದ್ ಯಾದವ್ ಅವರು ಹೇಳಿದ ನಂತರ ಜೆಡಿಯು ಈ ರೀತಿ ಪ್ರತಿಕ್ರಿಯೆ ನೀಡಿದೆ.
ಆದರೆ, ಲಾಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರ ಪುತ್ರ ತೇಜಸ್ವಿ ಯಾದವ್ ಅವರು, “ನೀವು ಅವರನ್ನು ಈ ರೀತಿ ಕೇಳುತ್ತಲೇ ಇರುತ್ತೀರಿ; ಅವರು ಇನ್ನೇನು ಹೇಳುತ್ತಾರೆ? ಅವರು ನಿಮ್ಮೆಲ್ಲರನ್ನು ಸಮಾಧಾನಪಡಿಸಲು ಹೀಗೆ ಹೇಳಿದ್ದಾರೆ” ಎಂದರು.
ಆರ್ಜೆಡಿ ಮುಖ್ಯಸ್ಥರು ಆತಂಕದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.
ಇನ್ನು ಗಾಂಧಿ ಅನುಯಾಯಿಗಳು, ಗೋಡ್ಸೆ ಅನುಯಾಯಿಗಳಿಂದ ಬೇರ್ಪಟ್ಟರೆ ನಾವು ಅವರೊಂದಿಗೆ ಇದ್ದೇವೆ ಎಂದು ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಹೇಳಿದ್ದಾರೆ.