ಸಂಗೀತ- ನೃತ್ಯ ಕಲಾವಿದರನ್ನು ಸತತವಾಗಿ ಪ್ರೋತ್ಸಾಹಿಸುವ ಸಲುವಾಗಿ, ತಮ್ಮ ಸಂಗೀತ ಸಂಭ್ರಮ ಸಂಸ್ಥೆಯ ಮೂಲಕ ಪ್ರತಿವರ್ಷ `ನಿರಂತರ ರಾಷ್ಟ್ರೀಯ ಸಂಗೀತ -ನೃತ್ಯೋತ್ಸವ’ವನ್ನು ಆಯೋಜಿಸುತ್ತಿರುವ ಡಾ. ಪುಸ್ತಕಂ ರಮಾ ಅವರು ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಉತ್ಸವ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ನಮ್ಮ ನಾಡಿನ ಒಳ-ಹೊರಗಿನ ಅನೇಕ ಕಲಾವಿದರು ವೈವಿಧ್ಯಪೂರ್ಣ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಬಹು ಸೊಗಸಾಗಿ ಪ್ರಸ್ತುತಪಡಿಸಿ ಕಲಾರಸಿಕರ ಮನಸೂರೆಗೊಂಡರು. ವಿವಿಧ ನೃತ್ಯ ಕಲಾವಿದರುಗಳಿಂದ ಏಕವ್ಯಕ್ತಿ ನೃತ್ಯ ಸುಂದರ ಪ್ರದರ್ಶನಗಳು ನಡೆದು, ಎಂ.ಎಸ್. ನಾಟ್ಯಕ್ಷೇತ್ರದ ಗುರು ಕೌಸಲ್ಯ ನಿವಾಸ್ ಮತ್ತು ತಂಡ `ರಾಮಪ್ರಿಯ ತುಳಸೀದಾಸ’ ನೃತ್ಯರೂಪಕವನ್ನು ಬಹು ಸುಮನೋಹರವಾಗಿ, ಹೃದಯಂಗಮವಾಗಿ ಅರ್ಪಿಸಿದರು. ಖ್ಯಾತ ಕೊಳಲುವಾದಕ ವಿ. ರಘುನಂದನ್ ವಿಶಿಷ್ಟ ಪರಿಕಲ್ಪನೆಯ ವಾದ್ಯ-ಗಾಯನ ಸಂಯೋಜನೆಗಳ ಮನನೀಯ ಕಾರ್ಯಕ್ರಮ ನೂತನ ಅನುಭವ ನೀಡಿದವು.
ಕಡೆಯ ದಿನ- ಸಂಗೀತ ಸಂಭ್ರಮ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಗಾಯಕಿಯರಾದ ದೀಪ್ತಿ ಶ್ರೀನಾಥ್, ಹರಿಣಿ ಶ್ರೀಧರ್ ಮುಂತಾದ ಗಾಯಕರು ದಿ. ಚಂದ್ರಿಕಾ ಅವರಿಗೆ ಭಾವಾಂಜಲಿ ಅರ್ಪಿಸಿದ ಗಾಯನ ಸಂಜೆ ಮನನೀಯವಾಗಿತ್ತು. ಅನಂತರ ಚಲನಚಿತ್ರ ನಿರ್ದೇಶಕ ನಾಗಾಭರಣ, ಲಲಿತಾ ಶ್ರೀನಿವಾಸನ್, ಆನೂರು ಅನಂತ ಕೃಷ್ಣ ಶರ್ಮ, ಎಂ.ಎಸ್. ಶೀಲಾ, ಡಾ. ಎಂ.ಆರ್.ವಿ. ಪ್ರಸಾದ್, ಡಾ. ಟಿ.ಎಸ್. ಸತ್ಯವತಿ, ನಾಗವೇಣಿ ರಂಗನ್ ಸೇರಿದಂತೆ 14 ಜನ ಸಾಧಕರಿಗೆ `ಸಂಭ್ರಮ’ ಪ್ರಶಸ್ತಿಯನ್ನು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ನಾಗಮಣಿ ಶ್ರೀನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಪಿ. ರಮಾ ಉಪಸ್ಥಿತರಿದ್ದರು.