ಬೆಂಗಳೂರು: ಕನ್ನಡದಲ್ಲಿ ಮಾತನಾಡಿದ್ದಕ್ಕೆ, ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮಹದೇವ ಎಂಬ ಬಸ್ ನಿರ್ವಾಹಕರ ಮೇಲೆ ಮರಾಠಿ ಪುಂಡರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿ ಪೊಲೀಸರು ಮಹದೇವ ಅವರ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬನನ್ನೂ ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದಲ್ಲಿ ಇದರ ಪರಿಣಾಮ ಭೀಕರವಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.
ಕನ್ನಡಿಗರು ಸೌಹಾರ್ದಪ್ರಿಯರು, ಶಾಂತಿಪ್ರಿಯರು. ಹಾಗಂದ ಮಾತ್ರಕ್ಕೆ ನಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸುವ ಭಾಷಾಂಧರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಕಿತ್ತುಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾದ ಮೇಲೆ ಹತಾಶರಾಗಿರುವ ಭಾಷಾಂಧ ಮರಾಠಿಪುಂಡರು ಈಗ ಕನ್ನಡಿಗರ ಮೇಲೆ ಕೈಮಾಡುವ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಪೊಲೀಸರು ಇವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಕನ್ನಡಿಗರ ಸಿಟ್ಟು ರಟ್ಟೆಗೆ ಬರುತ್ತದೆ. ಅಂಥ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಪುಂಡರನ್ನು ಮೊದಲು ಬಂಧಿಸಲಿ” ಎಂದು ಆಗ್ರಹಿಸಿದ್ದಾರೆ.
“ಹಲ್ಲೆಗೊಳಗಾದ ಮಹದೇವ ಅವರು ಬೇಗ ಗುಣಮುಖರಾಗಲಿ, ಅವರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ.
ಈಗಾಗಲೇ ನಮ್ಕ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಸೇರಿದಂತೆ ನಮ್ಮ ಪದಾಧಿಕಾರಿಗಳು ಮಹದೇವ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೆಎಸ್ ಆರ್ ಟಿಸಿ ಚಾಲಕರು, ನಿರ್ವಾಹಕರು ಈ ಘಟನೆಯಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ಇಂಥ ಹೇಡಿಗಳಿಗೆ ಬೆದರುವ ಅಗತ್ಯವೂ ಇಲ್ಲ” ಎಂದಿದ್ದಾರೆ.
“ಕರ್ನಾಟಕದ ನೆಲದಲ್ಲಿ ಬದುಕುವವರು ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು. ಅದನ್ನು ಹೊರತುಪಡಿಸಿ ತಮ್ಮ ಭಾಷೆ ಕಲಿಯಿರಿ ಎಂದು ತಾಕೀತು ಮಾಡಿ ದೌರ್ಜನ್ಯ ನಡೆಸಲು ಹೊರಟರೆ ಅಂಥವರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ. ಇದು ನನ್ನ ನೇರವಾದ ಎಚ್ಚರಿಕೆ” ಎಂದು ತಿಳಿಸಿದ್ದಾರೆ.