ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತದ ಬೇಗೆ ಇನ್ನು ನಿಂತಿಲ್ಲ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ನಡೆಸುತ್ತಿರುವ ತಮ್ಮ ಸಮರವನ್ನು ಮುಂದುವರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪಕ್ಷದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನಾವು ಕೈಗೊಂಡಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾವು ಸ್ಪರ್ಧಿಸುತ್ತೇವೆ. ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನಮ್ಮ ನಿಲುವನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಯತ್ನಾಳ್ ಅವರ ಹಿಂದೆ ನಾವೀದ್ದೇವೆ. ರಾಜ್ಯಾಧ್ಯಕ್ಷರ ಬದಲಾವಣೆಯನ್ನು ನಾವು ಕೇಳಿದ್ದೇವೆ. ಚುನಾವಣೆಗೆ ನಾವು ಸಿದ್ದರಿದ್ದೇವೆ.
ನಮ್ಮಿಂದ ಯಾರಾದರೊಬ್ಬರನ್ನು ಅಭ್ಯರ್ಥಿಯನ್ನಾಗಿಸುತ್ತೇವೆ. ನನ್ನನ್ನೇ ಅಭ್ಯರ್ಥಿಯಾಗು ಎಂದರೆ ಅಧ್ಯಕ್ಷ ಹುದ್ದೆ ಸ್ವೀಕರಿಸಿ ನಿಭಾಯಿಸಲು ಸಿದ್ದನಿದ್ದೇನೆ ಎಂದ ಅವರು ತಿಳಿಸಿದ್ದಾರೆ.
ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.ಹೀಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ಸರ್ವಸಮ್ಮತವಾಗಿ ಅವಿರೋಧವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದರೂ ಇದೀಗ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ ಎಂಬ ಮುನ್ಸೂಚನೆ ಕುಮಾರ ಬಂಗಾರಪ್ಪ ಹೇಳಿಕೆಯಿಂದ ಹೊರ ಬಿದ್ದಂತಾಗಿದೆ.