ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟಗಳು ಮುಂದುವರೆದಿರುವ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಕರೆದಿದ್ದು, ಈ ಸಭೆ ಸಾಕಷ್ಟು ಕುತೂಹಲಗಳನ್ನು ಮೂಡಿಸಿದೆ.
ಮುಖ್ಯಮಂತ್ರಿಗಳು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಇರುವ ಬಣಗಳು ಸಕ್ರಿಯವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇರುವ ಬಣವು ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸುತ್ತಿದ್ದು, ಸಭೆ ವೇಳೆ ಈ ಕುರಿತ ಸಂದೇಶವನ್ನು ಪಕ್ಷದ ಹೈಕಮಾಂಡ್ಗೆ ಪರೋಕ್ಷವಾಗಿ ರವಾನಿಸುವ ಸಾಧ್ಯತೆಯಿದೆ.
ಈ ನಡುವೆ ಶನಿವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಮನೆಗೆ ಭೇಟಿ ನೀಡಿದ್ದು, ಈ ಭೇಟಿ ಮಹತ್ವ ಪಡೆದುಕೊಂಡಿದೆ. ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ನಾಯಕರ ಮಾತುಕತೆಗಳು ಸಿಎಲ್’ಪಿ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2023 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವಲ್ಲಿ ಯಶಸ್ವಿಯಾದ ಸಿದ್ದರಾಮಯ್ಯ ಅವರು, ತಮ್ಮ ಅಧಿಕಾರಾವಧಿಯ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅಧಿಕಾರ ಹಸ್ತಾಂತರಿಸಬೇಕಿದ್ದು, ಇದಕ್ಕೆ ಅವರು ಬದ್ಧರಾಗಿದ್ದಾರೆ. ಆದರೆ, ತಾವು ಆಯ್ಕೆ ಮಾಡಿದ ನಾಯಕ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಡಿಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ನಾಯಕತ್ವನ್ನು ವಿರೋಧಿಸಿದ ರೀತಿಯೇ ಈ ನಿಲುವುಗೆ ಕಾರಣವೆಂದಬ ಮೂಲಗಳು ತಿಳಿಸಿವೆ.
ಈ ಉದ್ದೇಶದಿಂದಲೇ ಪರಮೇಶ್ವರ್ ಅವರ ಪರ ಅಭಿಪ್ರಾಯ ಮೂಡಿಸಲು ಎಸ್ಸಿ/ಎಸ್ಟಿ ಶಾಸಕರ ಸಭೆ ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಶಿವಕುಮಾರ್ ಅವರು ಹೈಕಮಾಂಡ್ ಮೂಲಕ ಸಭೆಗೆ ಬ್ರೇಕ್ ಹಾಕಿಸಿದ್ದರು ಎನ್ನಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಕರ್ನಾಟಕದ ಉಸ್ತುವಾರಿ) ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಡಾ. ಪರಮೇಶ್ವರ್ ಅವರಿಗೆ ಸಭೆ ನಡೆಸದಂತೆ ಸೂಚಿಸಿದ್ದರು. ಆದರೆ, ಅವರ ಸೂಚನೆಯನ್ನು ಪಾಲಿಸಿದ ಡಾ. ಪರಮೇಶ್ವರ್ ಅವರು, ನಾವು ಸಭೆಯನ್ನು ರದ್ದುಗೊಳಿಸಿಲ್ಲ, ಮುಂದೂಡಿದ್ದೇವಷ್ಟೇ. ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ಹೇಳಿದ್ದರು.
ಸಭೆ ವಿಚಾರವಾಗಿ ಸಚಿವ ರಾಜಣ್ಣ ಅವರು ಹೈಕಮಾಂಡ್ ಹಾಗೂ ಡಿಕೆ.ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾ ಹೊರಹಾಕಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಕೆ.ಶಿವಕುಮಾರ್ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿಕೆ.ಸುರೇಶ್ ಅವರು, ರಾಜಣ್ಣ ಅವರು ತಮ್ಮ ಅಭಿಪ್ರಾಯವನ್ನು ಸಿಎಂ ಹಾಗೂ ಪಕ್ಷದ ಹೈಕಮಾಂಡ್ ಮುಂದೆ ವ್ಯಕ್ತಪಡಿಸಬೇಕೆಂದು ಹೇಳಿದ್ದರು.
ಸಿದ್ದರಾಮಯ್ಯ ಅವರ ಬೆಂಬಲಿಗರಾದ ರಾಜಣ್ಣ ಅವರು, ಹೈಕಮಾಂಡ್ಗೆ ಸಂದೇಶ ರವಾನಿಸುವ ಸಲುವಾಗಿ ಈ ಹೇಳಿಕೆಗಳನ್ನು ನೀಡಿರಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಸಭೆ ಹಿನ್ನೆಲೆಯಲ್ಲಿ ರಣದೀಪ್ ಸುರ್ಜೇವಾಲಾ ಅವರು ಇಂದು ನಗರಕ್ಕೆ ಆಗಮಿಸಲಿದ್ದು, ಈ ವೇಳೆ ಸಿದ್ದು ಬಣದಲ್ಲಿರುವ ಡಾ. ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಇತರೆ ನಾಯಕರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ, ಸಿದ್ದರಾಮಯ್ಯ ಅವರ ಸಲಹೆಯಂತೆ ದಲಿತ ನಾಯಕನನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸುವ ಸಾಧ್ಯತೆಯಿದೆ, ಒಂದು ವೇಳೆ ಪಕ್ಷವು ಒಪ್ಪದಿದ್ದರೆ ಎಸ್ಸಿ/ಎಸ್ಟಿಗಳ ಕೋಪಕ್ಕೆ ಗುರಿಯಾಗಬಹುದು ಎಂದು ಗಮನಕ್ಕೆ ತರಲಿದ್ದಾರೆಂದು ಮೂಲಗಳು ತಿಳಿಸಿವೆ.
ಡಾ. ಪರಮೇಶ್ವರ ಅವರ ಹಿರಿತನವನ್ನು ಗಮನದಲ್ಲಿಟ್ಟುಕೊಂಡು, ಸುರ್ಜೆವಾಲಾ ಅವರು ಪರಮೇಶ್ವರ್ ಅವರ ನಿವಾಸದಲ್ಲಿ ಭೇಟಿಯಾಗುವ ಸಾಧ್ಯತೆಗಳಿವೆ.
ನಾನು ಸುರ್ಜೆವಾಲಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಮತ್ತು ಎಸ್ಸಿ/ಎಸ್ಟಿ ಶಾಸಕರ ಸಭೆಯ ಉದ್ದೇಶವನ್ನೂ ವಿವರಿಸಿದ್ದೇನೆ. ಸುರ್ಜೆವಾಲಾ ಅವರು ನಗರಕ್ಕೆ ಬಂದಾಗ, ನಾನು ಅವರೊಂದಿಗೆ ಚರ್ಚೆ ನಡೆಸಿ, ಸಭೆ ನಡೆಸಲಾಗುವುದು ಎಂದು ಪರಮೇಶ್ವರ್ ಅವರು ತಿಳಿಸಿದ್ದಾರೆ.