ತಿ.ನರಸೀಪುರ: ನಿವೇಶನ ಮತ್ತು ವಸತಿ ಯೋಜನೆ ಮಂಜೂರು ಮಾಡುವವರೆಗೂ ಪ್ರತಿಭಟನಾ ಧರಣಿಯನ್ನು ಹಿಂಪಡೆಯಲ್ಲವೆಂದು ಪಟ್ಟು ಹಿಡಿದಿರುವ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳು ನೆಲೆಯೇ ಇಲ್ಲದ ನಮಗೆ ತಾತ್ಕಾಲಿಕ ಸ್ಥಳವನ್ನು ತೋರಿಸಿ ಎಂದು ನಿವೇಶನ ಮಂಜೂರಾತಿಗೆ 10 ದಿನಗಳ ಕಾಲಾವಕಾಶ ಕೇಳಿದ ತಹಸೀಲ್ದಾರ್ ಅವರ ಮನವಿಯನ್ನು ತಿರಸ್ಕರಿಸಿ ಮಂಗಳವಾರ ಎರಡನೇ ದಿನಕ್ಕೆ ಪ್ರತಿಭಟನಾ ಧರಣಿಯನ್ನು ಮುಂದುವರೆಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಿವೇಶನ ಹಾಗೂ ವಸತಿ ಯೋಜನೆ ಮಂಜೂರು ಮಾಡುವಂತೆ ಆಗ್ರಹಿಸಿ ಕೋಳಿ, ಕೋತ್ತಿಗಳ ಕಟ್ಟಿ ಹಾಕಿ, ಎಳೆ ವಯಸ್ಸಿನ ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಡನೆ ಪ್ಲಾಸ್ಟಿಕ್ ಟಾರ್ಪಲ್ ಹಾಕಿ ವಾಸ್ತವ್ಯ ಹೂಡಿ ಕಳೆದ ಸೋಮಾವಾರದಿಂದ ಚಳಿಯನ್ನು ಲೆಕ್ಕಿಸದೆ ಪ್ರತಿಭಟನಾ ಧರಣಿ ಕುಳಿತಿರುವ ಸ್ಥಳಕ್ಕೆ ಇಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಗಮಿಸಿ ತಮ್ಮ ಅಲೆಮಾರಿ ಕೊರಚ ಕುಟುಂಬಗಳ ಅಹವಾಲು ಆಲಿಸಿದರು.
ಈ ವೇಳೆ ತಹಸೀಲ್ದಾರ್ ಟಿ.ಜಿ.ಸುರೇಶಾ ಚಾರ್ ಮಾತನಾಡಿ, ಅಗತ್ಯ ದಾಖಲೆಗಳನ್ನು ಕೊಟ್ಟರೆ ಕೊರಚ ಸಮುದಾಯದ 35 ಕುಟುಂ ಬಗಳಿಗೂ ಪುರಸಭೆ ಪರಿಮಿತಿಯಲ್ಲಿ ಸೂಕ್ತ ನಿವೇಶನ ಮಂಜೂರು ಮಾಡಲಾಗುವುದು. ನಿವೇಶನ ಹಂಚಿಕೆಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು 10 ದಿನಗಳ ಕಾಲಾವಕಾಶ ಬೇಕು. ಅಲ್ಲಿಯವರೆಗೂ ಪ್ರತಿಭಟನಾ ಧರಣಿಯನ್ನು ಕೈ ಬಿಟ್ಟು ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಧರಣಿ ನೇತೃತ್ವವನ್ನು ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕೋರಚರ ನಿವೇಶನದ ಹೋರಾಟ ನಿನ್ನೆ ಮೊನ್ನೆಯದಲ್ಲ, ಹೆದ್ದಾರಿ ಕಾಮಗಾರಿಗೆ ವಾಸವಿದ್ದ ಖಾಸಗಿ ಜಾಗವನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ದಶಕದಿಂದಲೂ ನಿವೇಶನಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿಗೆ ಅಲೆಯುತ್ತಿದ್ದಾರೆ. ಸೂಕ್ತ ನಿವೇಶನ ಮಂಜೂರು ಮಾಡುವವರೆಗೂ ಇರೋಕೆ ತಾತ್ಕಾಲಿಕ ಜಾಗ ತೋರಿಸಿ ಇಲ್ಲವೇ ತಾಲ್ಲೂಕು ಕಚೇರಿ ಆವರಣದಲ್ಲಿ ಬಿಡಾರ ಹೂಡಿರುತ್ರೇವೆ. ಪುರಸಭೆ ವ್ಯಾಪ್ತಿಯ ನಿವಾಸಿಗಳು ನಿರಾಶ್ರಿತರಾಗಿ ಧರಣಿ ಕುಳಿತಿದ್ದರೂ ಸೌಜನ್ಯಕ್ಯೂ ಬೇಟಿ ನೀಡದ ಮುಖ್ಯಾಧಿಕಾರಿ ಹಾಗೂ ಪ ಜಾತಿಯಲ್ಲಿರುವ ಅಲೆಮಾರಿ ಕೊರಚ ಸಮುದಾಯದ ಆಲಿಸದ ಸಮಾಜ ಕಲ್ಯಾಣಾಧಿಕಾರಿ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ನಿವೇಶನ ಮಂಜೂರು ಮಾಡುವ ತನಕ ಧರಣಿ ಹಿಂಪಡೆಯಲ್ಲವೆಂದು ತಾಲ್ಲೂಕು ಆಡಳಿತದ ಮನವಿಯನ್ನು ನಿರಾಕರಿಸಿದರು.
ಮನವೊಲಿಕೆ ಸಂದರ್ಭ ಕೊರಚರು ಸ್ಥಳೀಯರಲ್ಲ, ಹೊರಗಿನವರು ಎಂದು ತಹಸೀಲ್ದಾರ್ ಹೇಳಿದ್ದಕ್ಕೆ ಪ್ರತಿಭಟನಾ ನಿರತರು ವಾಗ್ವಾದ ನಡೆಸಿದರು. ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ನಿವೇಶನಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮಗಳ ಮೇಲೆ ಎರಡು ಬಾರಿ ರಿಯಲ್ ಎಸ್ಟೇಟ್ ಮಾಫಿಯಾ ಗಳಿಂದ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ. ಇಷ್ಟೇಲ್ಲಾ ಹಿಂಸೆ ಕೊಡುವ ಬದಲು ಎಲ್ಲರನ್ನೂ ಜೈಲಿಗೆ ಕಳುಹಿಸಿ ಬಿಡಿ, ಅಲ್ಲಿಯೇ ಕುಟುಂಬ ಸಮೇತ ವಾಸವಿದ್ದುಬಿಡುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾ ನಿರತರಿಂದ ಸ್ಪಂದನೆ ಸಿಗದ್ದಕ್ಕೆ ಸುರೇಶಾಚಾರ್ ಅವರು ಸ್ಥಳದಿಂದ ಕಾಲ್ಕಿತ್ತರು. ಧರಣಿ ಬೆಂಬಲಿಸಿ ದಸಂಸ ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ವಿಭಾಗೀಯ ಸಂಚಾಲಕ ಶಂಕನಪುರ ಮಂಜು, ಕಲ್ಲಹಳ್ಳಿ ಕುಮಾರ್, ಕೃಷ್ಣಮೂರ್ತಿ ಬಸವಟ್ಟಿಗೆ, ಹೊಳೆಯಪ್ಪ, ಗಜೇಂದ್ರ ಹಾಗೂ ಮರಿಸ್ವಾಮಿ ಬೆಂಬಲ ಸೂಚಿಸಿ ಭಾಗವಹಿಸಿದ್ದರು.
ಗ್ರೇಡ್ ಟು ತಹಸೀಲ್ದಾರ್ ರಾಜಾ ಕಾಂತ್, ತಾ.ಪಂ ಕಾರ್ಯ ನಿರ್ವಹಕ ಅಧಿಕಾರಿ ಪಿ.ಎಸ್.ಅನಂತರಾಜು, ಪೆÇಲೀಸ್ ಇನ್ಸ್ಪೆಕ್ಟರ್ ಧನಂಜಯ, ಶಿರಸ್ತೇದಾರ್ ಮಂಜುಳ, ತಾಲೂಕು ಕುಳುವ ಸಂಘದ ಅಧ್ಯಕ್ಷ ಕೊಡಗಹಳ್ಳಿ ರವಿಕುಮಾರ್, ದಸಂಸ ತಾಲ್ಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರು ರಾಜು, ಕಿರಗಸೂರು ರಜನಿ, ನಾಗರಾಜ ಮೂರ್ತಿ, ಬನ್ನಹಳ್ಳಿ ಉಮೇಶ್, ಕೊರಚ ಸಮುದಾಯದ ಮುಖಂಡರಾದ ರಾಜು, ವೆಂಕಟೇಶ್, ಭಾಸ್ಕರ್, ಮೂಗಪ್ಪ, ರಮೇಶ್, ಪರಶುರಾಮ, ಶಾಂತರಾಜು ಇದ್ದರು.